ಮೊದಲ ಟೆಸ್ಟ್ | ರಾಹುಲ್, ಗಿಲ್ ಶತಕ; ಭಾರತ 368/3

ಕೆಎಲ್ ರಾಹುಲ್ , ಶುಭಮನ್ ಗಿಲ್ | Photo Credit : PTI
ನ್ಯೂ ಚಂಡೀಗಢ, ಜೂ. 6: ನ್ಯೂ ಚಂಡೀಗಢದ ವಿಪರೀತ ಸೆಖೆಯ ನಡುವೆ ಭಾರತೀಯ ಬ್ಯಾಟರ್ಗಳು ಅಫ್ಘಾನಿಸ್ತಾನ ಬೌಲರ್ಗಳ ಬೆವರಿಳಿಸಿದ್ದು, ಏಕೈಕ ಟೆಸ್ಟ್ ನ ಮೊದಲ ದಿನದಾಟದಂತ್ಯಕ್ಕೆ ತಮ್ಮ ತಂಡದ ಮೊತ್ತವನ್ನು 3 ವಿಕೆಟ್ಗಳ ನಷ್ಟಕ್ಕೆ 368 ರನ್ಗೆ ತಲುಪಿಸಿದರು.
ಶನಿವಾರ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡದ ಪರ ಕೆ.ಎಲ್. ರಾಹುಲ್ (100 ರನ್, 165 ಎಸೆತ, 11 ಬೌಂಡರಿ) ಹಾಗೂ ಶುಭಮನ್ ಗಿಲ್ (ಔಟಾಗದೆ 103 ರನ್, 143 ಎಸೆತ, 11 ಬೌಂಡರಿ, 1 ಸಿಕ್ಸರ್) ಶತಕ ಗಳಿಸಿ ತಂಡವನ್ನು ಆಧರಿಸಿದರು.
ಮೊದಲ ಒಂದು ಗಂಟೆಯ ಆಟದಲ್ಲಿ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ (24 ರನ್, 32 ಎಸೆತ) ಆಕ್ರಮಣಕಾರಿ ಆರಂಭ ಒದಗಿಸಿದರು.
ಜೈಸ್ವಾಲ್ ಅವರು ಮುಹಮ್ಮದ್ ಸಲೀಂ ಬೌಲಿಂಗ್ನಲ್ಲಿ ಅಫ್ಸರ್ ಝಝೈಗೆ ವಿಕೆಟ್ ಒಪ್ಪಿಸಿದರು. ರಾಹುಲ್ 10ನೇ ಓವರ್ನಲ್ಲಿ ಜೀವದಾನ ಪಡೆದರು.
ಭಾರತ ತಂಡ 41 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆಗ ಮೂರನೇ ಕ್ರಮಾಂಕದ ಆಟಗಾರ ಸಾಯಿ ಸುದರ್ಶನ್ (81 ರನ್, 104 ಎಸೆತ, 13 ಬೌಂಡರಿ) ಹಾಗೂ ರಾಹುಲ್ ಎರಡನೇ ವಿಕೆಟ್ಗೆ 139 ರನ್ ಜೊತೆಯಾಟದಲ್ಲಿ ಭಾಗಿಯಾದರು.
ಸುದರ್ಶನ್ ಔಟಾದ ನಂತರ ರಾಹುಲ್ ಗೆ ಗಿಲ್ ಸಾಥ್ ನೀಡಿದರು. ಈ ಇಬ್ಬರು ಮೂರನೇ ವಿಕೆಟ್ಗೆ 67 ರನ್ ಸೇರಿಸಿದರು.
ನಾಯಕ ಗಿಲ್ 138 ಎಸೆತಗಳಲ್ಲಿ 11ನೇ ಟೆಸ್ಟ್ ಶತಕವನ್ನು ಪೂರೈಸಿದರು. ರಾಹುಲ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಮೂರನೇ ಬಾರಿ ಶತಕ ಗಳಿಸಿದ ತಕ್ಷಣವೇ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ನ ಲೆನ್ ಹಟ್ಟನ್ (4) ನಂತರ ಶತಕ ಸಿಡಿಸಿದ ಬೆನ್ನಿಗೇ ಹೆಚ್ಚು ಬಾರಿ ಔಟಾದ ಆಟಗಾರ ಎನಿಸಿಕೊಂಡರು.
ದಿನದಾಟದಂತ್ಯಕ್ಕೆ ಗಿಲ್ ಹಾಗೂ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ (ಔಟಾಗದೆ 50, 70 ಎಸೆತ, 2 ಬೌಂಡರಿ, 3 ಸಿಕ್ಸರ್) ನಾಲ್ಕನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 121 ರನ್ ಸೇರಿಸಿ ಭಾರತ ತಂಡವು ಮೊದಲ ದಿನದಾಟದಲ್ಲಿ ಗೌರವಾರ್ಹ ಮೊತ್ತ ದಾಖಲಿಸಲು ನೆರವಾದರು. ಪಂತ್ ಭಾರತದ ಪರ ತಮ್ಮ 50ನೇ ಟೆಸ್ಟ್ ಪಂದ್ಯವನ್ನಾಡಿದರು.
ಅಫ್ಘಾನಿಸ್ತಾನದ ಪರ ಮುಹಮ್ಮದ್ ಸಲೀಂ (2–67) ಯಶಸ್ವಿ ಪ್ರದರ್ಶನ ನೀಡಿದರು.
ಚಂಡೀಗಢ ನಗರವು ಇದೇ ಮೊದಲ ಬಾರಿ ಪುರುಷರ ಟೆಸ್ಟ್ ಕ್ರಿಕೆಟಿನ ಆತಿಥ್ಯ ವಹಿಸಿದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನಿಂಗ್ಸ್: 85 ಓವರ್ಗಳಲ್ಲಿ 368/3
(ಶುಭಮನ್ ಗಿಲ್ ಔಟಾಗದೆ 103, ಕೆ.ಎಲ್. ರಾಹುಲ್ 100, ಸಾಯಿ ಸುದರ್ಶನ್ 81, ರಿಷಭ್ ಪಂತ್ ಔಟಾಗದೆ 50, ಮುಹಮ್ಮದ್ ಸಲೀಂ 2–67)






