ಮೊದಲ ಟೆಸ್ಟ್: ಆಸ್ಟ್ರೇಲಿಯ 487 ರನ್ ಗೆ ಆಲೌಟ್
ಪಾಕಿಸ್ತಾನ 132/2, 500 ವಿಕೆಟ್ ಕ್ಲಬ್ ನತ್ತ ಲಿಯೊನ್

Photo: PTI
ಪರ್ತ್: ಆತಿಥೇಯ ಆಸ್ಟ್ರೇಲಿಯ ತಂಡ ಶುಕ್ರವಾರ ಮೊದಲ ಟೆಸ್ಟ್ ನ ತನ್ನ ಮೊದಲ ಇನಿಂಗ್ಸ್ ನಲ್ಲಿ 487 ರನ್ ಗಳಿಸಿ ಆಲೌಟಾಗಿದೆ. ಎರಡನೇ ದಿನದಾಟದಂತ್ಯಕ್ಕೆ ಪಾಕಿಸ್ತಾನ ತಂಡ ಪ್ರಥಮ ಇನಿಂಗ್ಸ್ ನಲ್ಲಿ 53 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. ಹಿರಿಯ ಆಫ್ ಸ್ಪಿನ್ನರ್ ನಥಾನ್ ಲಿಯೊನ್(497)ಅಬ್ದುಲ್ಲಾ ಶಫೀಕ್ ವಿಕೆಟನ್ನು ಕಬಳಿಸಿ 500 ಎಲೈಟ್ ಕ್ಲಬ್ ಗೆ ಸೇರುವತ್ತ ದಾಪುಗಾಲಿಟ್ಟಿದ್ದಾರೆ.
ಇಮಾಮ್ವುಲ್ ಹಕ್(38 ರನ್) ಹಾಗೂ ನೈಟ್ ವಾಚ್ಮ್ಯಾನ್ ಖುರ್ರಮ್ ಶಹಝಾದ್(7) ಕ್ರೀಸ್ ಕಾಯ್ದುಕೊಂಡಿದ್ದಾರೆ. ಶಫೀಕ್ ಹಾಗೂ ನಾಯಕ ಶಾನ್ ಮಸೂದ್(30 ರನ್)ವಿಕೆಟ್ ಗಳನ್ನು ಕಳೆದುಕೊಂಡಿರುವ ಪಾಕ್ ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಗಿಂತ 355 ರನ್ ಹಿನ್ನಡೆಯಲ್ಲಿದೆ.
ಶಫೀಕ್ ವಿಕೆಟನ್ನು ಕಬಳಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ 497ನೇ ವಿಕೆಟ್ ಪಡೆದ ಲಿಯೊನ್ ಗೆ ಕೇವಲ ಏಳು ಆಟಗಾರರನ್ನು ಒಳಗೊಂಡ 500 ವಿಕೆಟ್ ಕ್ಲಬ್ ಗೆ ಸೇರಲು ಇನ್ನು ಕೇವಲ ಮೂರು ವಿಕೆಟ್ ಅಗತ್ಯವಿದೆ.
ಇದಕ್ಕೂ ಮೊದಲು ಪಾಕ್ ವೇಗದ ಬೌಲರ್ ಆಮಿರ್ ಜಮಾಲ್ ತನ್ನ ಚೊಚ್ಚಲ ಪಂದ್ಯದಲ್ಲಿ 111 ರನ್ ಗೆ 6 ವಿಕೆಟ್ ಗಳನ್ನು ಕಬಳಿಸಿ ಗಮನ ಸೆಳೆದರು. ಮೊದಲ ದಿನದಾಟದಲ್ಲಿ ಡೇವಿಡ್ ವಾರ್ನರ್ 164 ರನ್ ಗಳಿಸಿ ಅಬ್ಬರಿಸಿದ್ದರೆ, ಶುಕ್ರವಾರ 2ನೇ ದಿನದಾಟದಲ್ಲಿ ಮಿಚೆಲ್ ಮಾರ್ಷ್ 90 ರನ್(107 ಎಸೆತ, 15 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದರು.
ಆಸ್ಟ್ರೇಲಿಯವು 5 ವಿಕೆಟ್ ಗಳ ನಷ್ಟಕ್ಕೆ 346 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಮಾರ್ಷ್ 16 ರನ್ ಹಾಗೂ ಕಾರೆ 15 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದರು. ಆಸ್ಟ್ರೇಲಿಯದ ಟಿ-20 ನಾಯಕ ಮಾರ್ಷ್ ತಾನಾಡಿದ 36ನೇ ಟೆಸ್ಟ್ ನಲ್ಲಿ 66 ಎಸೆತಗಳಲ್ಲಿ ಐದನೇ ಅರ್ಧಶತಕವನ್ನು ಪೂರೈಸಿದರು. 90 ರನ್ ಗಳಿಸಿ 4ನೇ ಶತಕದತ್ತ ಚಿತ್ತ ಹರಿಸಿದ್ದ ಮಾರ್ಷ್ ಗೆ ಶಹಝಾದ್ ಪೆವಿಲಿಯನ್ ಹಾದಿ ತೋರಿಸಿದರು.
ವಿಕೆಟ್ ಕೀಪರ್-ಬ್ಯಾಟರ್ ಅಲೆಕ್ಸ್ ಕಾರೆ 34 ರನ್ ಗಳಿಸಿ ಪಾಕ್ನ ಯಶಸ್ವಿ ಬೌಲರ್ ಜಮಾಲ್ ಗೆ ವಿಕೆಟ್ ಒಪ್ಪಿಸಿದರು. ಕಾರೆ ನಿರ್ ಗಮನದೊಂದಿಗೆ ಮಾರ್ಷ್ರೊಂದಿಗಿನ 90 ರನ್ ಜೊತೆಯಾಟ ಅಂತ್ಯವಾಯಿತು. ಮಿಚೆಲ್ ಸ್ಟಾರ್ಕ್, ನಾಯಕ ಕಮಿನ್ಸ್ ಹಾಗೂ ನಥಾನ್ ಲಿಯೊನ್ ವೇಗಿ ಜಮಾಲ್ಗೆ ವಿಕೆಟ್ ಒಪ್ಪಿಸಿದರು. ಆಸೀಸ್ 113.2 ಓವರ್ ಗಳಲ್ಲಿ 487 ರನ್ ಗೆ ಆಲೌಟಾಯಿತು.
ಸ್ಕೋರ್ ವಿವರ
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 113.2 ಓವರ್ ಗಳಲ್ಲಿ 487 ರನ್ ಗೆ ಆಲೌಟ್
(ಡೇವಿಡ್ ವಾರ್ನರ್ 164, ಮಿಚೆಲ್ ಮಾರ್ಷ್ 90, ಉಸ್ಮಾನ್ ಖ್ವಾಜಾ 41, ಹೆಡ್ 40, ಆಮಿರ್ ಜಮಾಲ್ 6-111, ಖುರ್ರಮ್ ಶಹಝಾದ್ 2-83)
ಪಾಕಿಸ್ತಾನ ಮೊದಲ ಇನಿಂಗ್ಸ್: 53 ಓವರ್ ಗಳಲ್ಲಿ 132/2
(ಅಬ್ದುಲ್ಲಾ ಶಫೀಕ್ 42, ಇಮಾಮ್ವುಲ್ ಹಕ್ ಔಟಾಗದೆ 38, ಶಾನ್ ಮಸೂದ್ 30, ಮಿಚೆಲ್ ಸ್ಟಾರ್ಕ್ 1-24, ಲಿಯೊನ್ 1-40)







