ಇಂದು ಮೊದಲ ಟೆಸ್ಟ್ ಆರಂಭ: ಭಾರತ-ವೆಸ್ಟ್ಇಂಡೀಸ್ ಹಣಾಹಣಿ
ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯ ಆಡುವ ಸಾಧ್ಯತೆ

ಡೊಮಿನಿಕಾ: ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ಭಾರತದ ಮಧ್ಯೆ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಬುಧವಾರದಿಂದ ಆರಂಭವಾಗಲಿದ್ದು, ಯಶಸ್ವಿ ಜೈಸ್ವಾಲ್ರನ್ನು ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿಸುವ ಮೂಲಕ ತಂಡದಲ್ಲಿ ಪರಿವರ್ತನೆಯ ಬಟನ್ ಒತ್ತಲು ಟೀಮ್ ಇಂಡಿಯಾ ಸಜ್ಜಾಗಿದೆ.
ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಆಘಾತಕಾರಿ ನಿರ್ಗಮನ ಕಂಡಿರುವ ಆತಿಥೇಯರು ವಿಶ್ವ ಕ್ರಿಕೆಟ್ನಲ್ಲಿ ತಾವು ಈಗಲೂ ಪ್ರಸ್ತುತ ಎಂದು ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ. ಭಾರತ ತಂಡ ಕೂಡ ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತಿದೆ.
ಚೇತೇಶ್ವರ ಪೂಜಾರ ಅನುಪಸ್ಥಿತಿಯಲ್ಲಿ ಭಾರತದ ಅಗ್ರ ಸರದಿ ತೆರವಾಗಿದೆ. ಮುಂಬೈನ ಪ್ರತಿಭಾವಂತ ಎಡಗೈ ಬ್ಯಾಟರ್ ಜೈಸ್ವಾಲ್ ತನ್ನ ಹೆಸರಿಗೆ ತಕ್ಕಂತೆ ಯಶಸ್ಸು ಸಾಧಿಸುವ ಭರವಸೆಯಲ್ಲಿದ್ದಾರೆ.
21ರ ಹರೆಯದ ಜೈಸ್ವಾಲ್ ಮುಂಬೈ, ಪಶ್ಚಿಮ ವಲಯ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ಪರ ಕೆಂಪು ಚೆಂಡಿನ ಕ್ರಿಕೆಟ್ನಲ್ಲಿ ಇನಿಂಗ್ಸ್ ಆರಂಭಿಸಿದ್ದಾರೆ.
ಕೆಮರ್ ರೋಚ್, ಶಾನನ್ ಗ್ಯಾಬ್ರಿಯೆಲ್, ಅಲ್ಝಾರಿ ಜೋಸೆಫ್ ಹಾಗೂ ಜೇಸನ್ ಹೋಲ್ಡರ್ ಅವರನ್ನೊಳಗೊಂಡ ಬೌಲಿಂಗ್ ದಾಳಿಯನ್ನು ಜೈಸ್ವಾಲ್ ದಿಟ್ಟವಾಗಿ ಎದುರಿಸಬೇಕಾಗಿದೆ.
ಭಾರತಕ್ಕೆ ನೂತನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯು ಈ ಹಿಂದಿನ ಎರಡು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಕಷ್ಟಕರವಾಗಿದೆ. ಉತ್ತಮ ವೇಗದ ಬೌಲಿಂಗ್ನಿಂದಾಗಿ ಭಾರತ ಸತತ ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ತಲುಪಿತ್ತು.
ಗಾಯಗೊಂಡಿರುವ ಜಸ್ಪ್ರಿತ್ ಬುಮ್ರಾ ಅನುಪಸ್ಥಿತಿ, ಮುಹಮ್ಮದ್ ಶಮಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಿರುವ ಕಾರಣ ಭಾರತದ ಬೌಲಿಂಗ್ ವಿಭಾಗದಲ್ಲಿ ಅನುಭವಿ ಬೌಲರ್ಗಳ ಕೊರತೆ ಎದ್ದು ಕಾಣುತ್ತಿದೆ.
ಇಶಾಂತ್ ಶರ್ಮಾ ಪ್ರಸಕ್ತ ಸರಣಿಯಲ್ಲಿ ಮೊದಲ ಬಾರಿ ವೀಕ್ಷಕವಿವರಣೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. 36ರ ಹರೆಯದ ಉಮೇಶ್ ಯಾದವ್ ಗಾಯದಿಂದ ಚೇತರಿಸಿಕೊಂಡಿದ್ದರೂ ಅವರಿಗೆ ಮತ್ತೆ ಕರೆ ನೀಡುವುದು ಕಷ್ಟಸಾಧ್ಯ.
19 ಟೆಸ್ಟ್ ಆಡಿರುವ ಮುಹಮ್ಮದ್ ಸಿರಾಜ್ ಐವರು ಬೌಲರ್ಗಳ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದು, 9 ಟೆಸ್ಟ್ ಪಂದ್ಯಗಳನ್ನಾಡಿರುವ ಶಾರ್ದೂಲ್ ಠಾಕೂರ್ ಜೊತೆ ಆಡಲಿದ್ದಾರೆ. ವೆಸ್ಟ್ ಇಂಡೀಸ್ ವೇಗದ ದಾಳಿಗೆ ಹೋಲಿಸಿದರೆ ಭಾರತ ಹೆಚ್ಚು ಅನುಭವಿ ಬೌಲರ್ಗಳನ್ನು ಹೊಂದಿಲ್ಲ.
ವೆಸ್ಟ್ಇಂಡೀಸ್ ಬ್ಯಾಟರ್ಗಳು ತಮ್ಮೊಳಗೆ 750ಕ್ಕೂ ಅಧಿಕ ಟೆಸ್ಟ್ ವಿಕೆಟ್ಗಳನ್ನು ಪಡೆದಿರುವ ಆರ್.ಅಶ್ವಿನ್(474 ವಿಕೆಟ್) ಹಾಗೂ ರವೀಂದ್ರ ಜಡೇಜರ(268 ವಿಕೆಟ್)ಸ್ಪಿನ್ ಸವಾಲು ಎದುರಿಸಬೇಕಾಗಿದೆ.
ಭಾರತ ನಾಲ್ಕು ಬೌಲರ್ಗಳನ್ನು ಸುಲಭವಾಗಿ ಆಯ್ಕೆ ಮಾಡಿದರೆ ಇನ್ನೊಂದು ಬೌಲರ್ ಸ್ಥಾನಕ್ಕಾಗಿ ಮುಕೇಶ್ ಕುಮಾರ್, ಜಯದೇವ್ ಉನದ್ಕಟ್ ಹಾಗೂ ನವದೀಪ್ ಸೈನಿ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಇಬ್ಬರು ಸ್ಪಿನ್ನರ್ಗಳು ಕಣಕ್ಕಿಳಿದರೆ, ಇಶಾನ್ ಕಿಶನ್ಗಿಂತ ಕೆ.ಭರತ್ ಉತ್ತಮ ವಿಕೆಟ್ ಕೀಪಿಂಗ್ ಮಾಡಬಲ್ಲರು.ವಿಂಡ್ಸರ್ ಪಾರ್ಕ್ ಕಳೆದ ಆರು ವರ್ಷಗಳಿಂದ ಯಾವುದೇ ಟೆಸ್ಟ್ ಪಂದ್ಯದ ಆತಿಥ್ಯವಹಿಸಿಲ್ಲ.ವೆಸ್ಟ್ಇಂಡೀಸ್ನ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿನ ಕಳಪೆ ಪ್ರದರ್ಶನವು ಟೆಸ್ಟ್ ಪಂದ್ಯದ ಪ್ರದರ್ಶನದ ಮೇಲೆ ಪರಿಣಾಮಬೀರುತ್ತದೆ ಎಂದು ಭಾರತ ಯೋಚಿಸುವುದು ಮೂರ್ಖತನ ವಾಗುತ್ತದೆ.
ವೆಸ್ಟ್ಇಂಡೀಸ್ನ ಇಬ್ಬರು ಪ್ರಮುಖ ಬೌಲರ್ಗಳಾದ ರೋಚ್ಗೆ(261 ವಿಕೆಟ್ಗಳು) ಸುಮಾರು 15 ವರ್ಷಗಳ ಅನುಭವವಿದೆ. ಗ್ಯಾಬ್ರಿಯೆಲ್(164 ವಿಕೆಟ್ಗಳು)ಹೊಸ ಚೆಂಡಿನಲ್ಲಿ ಎದುರಾಳಿಯನ್ನು ಕಾಡಬಲ್ಲರು ಭಾರತದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ವಿಭಿನ್ನ ಸವಾಲು ಎದುರಿಸುತ್ತಿದ್ದಾರೆ. ರೋಹಿತ್ ಅವರ ಭವಿಷ್ಯ 50 ಓವರ್ ವಿಶ್ವಕಪ್ ನಂತರ ಸ್ಪಷ್ಟವಾಗಲಿದೆ. ಮೊದಲಿಗೆ ಅವರು ಈ ಎರಡು ಪಂದ್ಯಗಳ ಸರಣಿಯನ್ನು ಗೆಲ್ಲಬೇಕು. ವಿಶ್ವಕಪ್ಗಿಂತ ಮೊದಲು ಟೆಸ್ಟ್ ನಲ್ಲಿ ಪ್ರಸ್ತುತವಾಗುಳಿಯಲು ಬ್ಯಾಟಿಂಗ್ನಲ್ಲಿ ಕೊಡುಗೆ ನೀಡಬೇಕಾಗಿದೆ.
ವಿರಾಟ್ ಕೊಹ್ಲಿ ಕೂಡ ದೊಡ್ಡ ಇನಿಂಗ್ಸ್ ಆಡಬೇಕಾಗಿದೆ. ಕೊಹ್ಲಿ ಹಾಗೂ ಪೂಜಾರ ಕಳೆದ 3 ವರ್ಷಗಳಿಂದ 30ಕ್ಕಿಂತ ಕೆಳಗಿನ ಸರಾಸರಿಯಲ್ಲಿ ಆಡುತ್ತಿದ್ದು, ಸೌರಾಷ್ಟ್ರ ಬ್ಯಾಟರ್ ಪೂಜಾರರನ್ನು ತಂಡದಿಂದ ಕೈಬಿಡಲಾಗಿದೆ.
ತಂಡಕ್ಕೆ ಪುನರಾಗಮನ ಮಾಡಿರುವ ಅಜಿಂಕ್ಯ ರಹಾನೆಯವರಿಗೆ ಉಪ ನಾಯಕನಾಗಿ ಭಡ್ತಿ ನೀಡಲಾಗಿದೆ. ರಹಾನೆ ಮತ್ತೆ ವೈಫಲ್ಯ ಕಂಡರೆ ಋತುರಾಜ್ ಗಾಯಕ್ವಾಡ್ ಅವರು ರಹಾನೆ ಸ್ಥಾನ ತುಂಬಲು ಸಜ್ಜಾಗಿದ್ದಾರೆ. ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್. ರಾಹುಲ್ ತಂಡಕ್ಕೆ ವಾಪಸಾಗುವ ಹಾದಿಯಲ್ಲಿದ್ದಾರೆ.