ನಾಳೆ ಮೊದಲ ಟೆಸ್ಟ್ ಆರಂಭ | ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾಕ್ಕೆ ಭಾರತ ವಿರುದ್ಧ ಕಠಿಣ ಸವಾಲು

Photo Credit ; AP \ PTI
ಕೋಲ್ಕತಾ, ನ.13: ಐತಿಹಾಸಿಕ ಈಡನ್ ಗಾರ್ಡನ್ಸ್ ಸ್ಟೇಡಿಯಂಗೆ ಆರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಮರಳುತ್ತಿದ್ದು, ಶುಕ್ರವಾರದಿಂದ ಆರಂಭವಾಗಲಿರುವ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವು ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಭಾರತದಲ್ಲಿ ಈ ಹಿಂದೆ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಹರಿಣ ಪಡೆ ತೀವ್ರ ಸ್ಪರ್ಧೆಯೊಡ್ಡುವಲ್ಲಿ ವಿಫಲವಾಗಿದ್ದು, ಈ ಪೈಕಿ 6 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಆಫ್ರಿಕಾ ತಂಡ ಈ ಬಾರಿ ತನ್ನ ಬೌಲಿಂಗ್ ವಿಭಾಗದಲ್ಲಿ ಹೊಸ ಮುಖಗಳೊಂದಿಗೆ ಆಗಮಿಸಿದ್ದು, ಈ ಹಿಂದಿನಂತೆ ಕೇಶವ ಮಹಾರಾಜ್ ಸ್ಪಿನ್ ಬೌಲಿಂಗ್ ನೇತೃತ್ವ ವಹಿಸಲಿದ್ದಾರೆ. ಎಸ್.ಮುತ್ತು ಸ್ವಾಮಿ 2019-20ರ ಪ್ರವಾಸದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
ಕಳೆದ ವರ್ಷ ನ್ಯೂಝಿಲ್ಯಾಂಡ್ ತಂಡ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಆಫ್ರಿಕಾ ತಂಡ ಕೂಡ ಕಿವೀಸ್ ಪಡೆಯನ್ನು ಸ್ಫೂರ್ತಿಯನ್ನಾಗಿಸಿಕೊಳ್ಳುವ ವಿಶ್ವಾಸದಲ್ಲಿದೆ. ಇಂಗ್ಲೆಂಡ್ ವಿರುದ್ಧ 2-2ರಿಂದ ಡ್ರಾ ಹಾಗೂ ವೆಸ್ಟ್ಇಂಡೀಸ್ ವಿರುದ್ಧ 2-0 ಅಂತರದಿಂದ ಗೆದ್ದಿರುವ ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಕಳೆದ ತಿಂಗಳು ಪಾಕಿಸ್ತಾನದ ವಿರುದ್ಧ 1-1ರಿಂದ ಡ್ರಾ ಸಾಧಿಸಿತ್ತು.
ಮೊದಲ ಟೆಸ್ಟ್ ಪಂದ್ಯದ ನಂತರ 2ನೇ ಟೆಸ್ಟ್ ಪಂದ್ಯವು ನ.22ರಿಂದ ಗುವಾಹಟಿಯಲ್ಲಿ ಆರಂಭವಾಗಲಿದೆ. ಒಂದು ತಿಂಗಳಿಗೂ ಅಧಿಕ ಸಮಯ ನಡೆಯಲಿರುವ ಉಭಯ ತಂಡಗಳ ನಡುವಿನ ಸರಣಿಯಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 5 ಟಿ-20 ಪಂದ್ಯಗಳು ನಡೆಯಲಿವೆ. ಟೆಸ್ಟ್ ಸರಣಿ ಮುಗಿದ ನಂತರ ಏಕದಿನ ಪಂದ್ಯಗಳು ರಾಂಚಿ, ರಾಯ್ಪುರ ಹಾಗೂ ವಿಶಾಖಪಟ್ಟಣದಲ್ಲಿ ಕ್ರಮವಾಗಿ ನ.30, ಡಿ.3 ಹಾಗೂ ಡಿ.6ರಂದು ನಡೆಯಲಿದೆ. ಟ್ವೆಂಟಿ-20 ಸರಣಿಯು ಡಿ.9ರಿಂದ 19ರ ತನಕ ಕಟಕ್, ಮುಲ್ಲನ್ಪುರ, ಧರ್ಮಶಾಲಾ, ಲಕ್ನೊ ಹಾಗೂ ಅಹ್ಮದಾಬಾದ್ನಲ್ಲಿ ನಡೆಯುವುದು.
ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯನ್ನು ಡ್ರಾಗೊಳಿಸಿದ್ದ ಭಾರತವು ಇತ್ತೀಚೆಗೆ ಸ್ವದೇಶದಲ್ಲಿ ನಡೆದಿದ್ದ ವೆಸ್ಟ್ಇಂಡೀಸ್ ವಿರುದ್ಧ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದ್ದು, ಸದ್ಯ ಭರ್ಜರಿ ಫಾರ್ಮ್ನಲ್ಲಿದೆ. ಶುಭಮನ್ ಗಿಲ್ ನಾಯಕತ್ವ, ರಿಷಭ್ ಪಂತ್ ಉಪ ನಾಯಕತ್ವದ ಭಾರತ ತಂಡವು ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವಿನ್ನರ್ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.
ಈಡನ್ಗಾರ್ಡನ್ಸ್ ಕ್ರೀಡಾಂಗಣವು 2019ರಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯದ ಆತಿಥ್ಯವಹಿಸಿತ್ತು. ಆಗ ಬಾಂಗ್ಲಾದೇಶ ವಿರುದ್ಧ ಪಿಂಕ್ ಬಣ್ಣದ ಚೆಂಡಿನಲ್ಲಿ ಹಗಲು-ರಾತ್ರಿ ಪಂದ್ಯ ನಡೆದಿತ್ತು. ಆ ನಂತರ ಭಾರತೀಯ ಕ್ರಿಕೆಟ್ನಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಹೊಸ ತಲೆಮಾರಿನ ತಂಡವನ್ನು ಶುಭಮನ್ ಗಿಲ್ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ಹವಾಮಾನ ವರದಿಯ ಪ್ರಕಾರ ನ.14ರಿಂದ 18ರ ತನಕ ಮಳೆಯಾಗುವ ಭೀತಿಯಿಲ್ಲ. ಉಷ್ಣಾಂಶವು ಬೆಳಗ್ಗೆ 18 ಡಿಗ್ರಿ ಸೆಲ್ಸಿಯಸ್ ಹಾಗೂ ಮಧ್ಯಾಹ್ನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮೊದಲ ಮೂರು ದಿನ ಆಕಾಶ ಶುಭ್ರವಾಗಿರಲಿದೆ. ಪಂದ್ಯಕ್ಕೆ ಮಳೆ ಇಲ್ಲವೇ ಮಂದ ಬೆಳಕು ಅಡ್ಡಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಅಭಿಮಾನಿಗಳು ಐದು ದಿನಗಳ ಕ್ರಿಕೆಟ್ ಪಂದ್ಯವನ್ನು ಆನಂದಿಸಬಹುದು.
ಈಡನ್ ಗಾರ್ಡನ್ಸ್ ಪಿಚ್ನಲ್ಲಿ ಸಮಬಲದ ಸ್ಪರ್ಧೆ ನಡೆಯುವ ನಿರೀಕ್ಷೆ ಇದೆ. ಬೆಳಗ್ಗಿನ ಅವಧಿಯ ತೇವಾಂಶವು ವೇಗಿಗಳಿಗೆ ನೆರವಾಗಬಹುದು. ಜಸ್ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ರಂತಹ ಬೌಲರ್ಗಳು ಸ್ವಿಂಗ್ ಪಡೆಯಬಹುದು. ಪಿಚ್ ಮೇಲೆ ಬಿಸಿಲಿನ ಕಿರಣ ಬಿದ್ದ ನಂತರ ಬ್ಯಾಟಿಂಗ್ ಸುಲಭವಾಗಲಿದೆ. 3ನೇ ಹಾಗೂ 4ನೇ ದಿನದಾಟದಲ್ಲಿ ಪಿಚ್ ತಿರುವು ಪಡೆಯಲಿದ್ದು, ಸ್ಪಿನ್ನರ್ಗಳಾದ ರವೀಂದ್ರ ಜಡೇಜ ಹಾಗೂ ವಾಶಿಂಗ್ಟನ್ ಸುಂದರ್ ಇದರ ಲಾಭ ಪಡೆಯುವ ನಿರೀಕ್ಷೆ ಇದೆ.
ನಂ.1 ಟೆಸ್ಟ್ ವಿಕೆಟ್ಕೀಪರ್ ರಿಷಭ್ ಪಂತ್ ಇದೀಗ ಫಿಟ್ ಆಗಿದ್ದು, ಭಾರತವು ಧ್ರುವ ಜುರೆಲ್ರನ್ನು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುವ 11ರ ಬಳಗದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಬಹುದು. ನಿತೀಶ್ ಕುಮಾರ್ ರೆಡ್ಡಿ ಅವರನ್ನು ಭಾರತ ‘ಎ’ ತಂಡದಲ್ಲಿ ಆಡಲು ಕಳುಹಿಸಲಾಗಿದೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇರಲಾರದು.
ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದಿರುವ ಟೆಸ್ಟ್ ತಂಡವನ್ನೇ ದಕ್ಷಿಣ ಆಫ್ರಿಕಾ ಕಣಕ್ಕಿಳಿಸಬಹುದು. ಮಾರ್ಕೊ ಜಾನ್ಸನ್ ಅವರು ವಿಯಾನ್ ಮುಲ್ದರ್ ಬದಲಿಗೆ ಆಡುವ 11ರ ಬಳಗ ಸೇರಬಹುದು. ನಾಯಕ ಟೆಂಬಾ ಬವುಮಾ ವಾಪಸಾಗಿದ್ದು, ಡೆವಾಲ್ಡ್ ಬ್ರೆವಿಸ್ ನಾಯಕನಿಗಾಗಿ ತನ್ನ ಸ್ಥಾನ ತೆರವುಗೊಳಿಸಬಹುದು.
*ಭಾರತ: ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ಕೀಪರ್),ಧ್ರುವ ಜುರೆಲ್, ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ಮುಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ.
*ದಕ್ಷಿಣ ಆಫ್ರಿಕಾ: ಏಡೆನ್ ಮರ್ಕ್ರಮ್, ರಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಟೋನಿ ಡಿ ರೆರ್ಝಿ, ಟೆಂಬಾ ಬವುಮಾ(ನಾಯಕ), ಕೈಲ್ ವೆರ್ರೆನ್ನೆ(ವಿಕೆಟ್ಕೀಪರ್), ಮಾರ್ಕೊ ಜಾನ್ಸನ್, ಸೈಮನ್ ಹಾರ್ಮರ್, ಕೇಶವ ಮಹಾರಾಜ, ಎಸ್.ಮುತ್ತುಸ್ವಾಮಿ, ಕಾಗಿಸೊ ರಬಾಡ.
ಅಂಕಿ-ಅಂಶ
*ಗಿಲ್ ನಾಯಕನಾಗಿ 7 ಟೆಸ್ಟ್ ಪಂದ್ಯಗಳ ಪೈಕಿ ಒಮ್ಮೆ ಮಾತ್ರ ಟಾಸ್ ಗೆದ್ದಿದ್ದಾರೆ. ಭಾರತದಲ್ಲಿ ಈ ಹಿಂದೆ ಆಡಿರುವ 7 ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಒಮ್ಮೆಯೂ ಟಾಸ್ ಗೆದ್ದಿಲ್ಲ.
4: ಟೆಸ್ಟ್ ಕ್ರಿಕೆಟ್ನಲ್ಲಿ 100 ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳುಹಿಸಿದ ದಕ್ಷಿಣ ಆಫ್ರಿಕಾದ 5ನೇ ವಿಕೆಟ್ಕೀಪರ್ ಎನಿಸಿಕೊಳ್ಳಲು ಕೈಲ್ ವೆರ್ರೆನ್ನೆಗೆ ಐದು ಆಟಗಾರರನ್ನು ಔಟ್ ಮಾಡಬೇಕಾಗಿದೆ.
*ಟೆಸ್ಟ್ ಕ್ರಿಕೆಟ್ನಲ್ಲಿ 300 ವಿಕೆಟ್ ಹಾಗೂ 4,000 ರನ್ನೊಂದಿಗೆ ಡಬಲ್ ಸಾಧನೆಗೈದ ವಿಶ್ವದ ನಾಲ್ಕನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಲು ರವೀಂದ್ರ ಜಡೇಜಗೆ ಕೇವಲ10 ರನ್ ಅಗತ್ಯವಿದೆ.







