ಮೊದಲ ಟೆಸ್ಟ್ | ಸೈಮರ್ ಹಾರ್ಮರ್ ಸ್ಪಿನ್ ಮೋಡಿ; ಭಾರತ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಐತಿಹಾಸಿಕ ಜಯ

Photo Credit : PTI
ಕೋಲ್ಕತಾ, ನ.16: ಆಫ್ ಸ್ಪಿನ್ನರ್ ಸೈಮರ್ ಹಾರ್ಮರ್(8/51) ಅವರ ಅಮೋಘ ಬೌಲಿಂಗ್ ಪ್ರದರ್ಶನದ ಬಲದಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಭಾರತ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 30 ರನ್ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ. 15 ವರ್ಷಗಳ ನಂತರ ಭಾರತ ನೆಲದಲ್ಲಿ ಈ ಅನಿರೀಕ್ಷಿತ ಗೆಲುವು ದಾಖಲಿಸಿರುವ ಹರಿಣ ಪಡೆಯು ಇತಿಹಾಸ ನಿರ್ಮಿಸಿದೆ.
ಮೂರನೇ ದಿನವಾದ ರವಿವಾರ ಗೆಲ್ಲಲು ಕೇವಲ 124 ರನ್ ಗುರಿ ಪಡೆದಿದ್ದ ಭಾರತ ತಂಡವು 93 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನ ಕಾರಣ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ.
ಭಾರತದ ಮೊದಲ ಇನಿಂಗ್ಸ್ ನಲ್ಲಿ 30 ರನ್ ಗೆ 4 ವಿಕೆಟ್ ಗಳನ್ನು ಪಡೆದಿದ್ದ ಹಾರ್ಮರ್, ಎರಡನೇ ಇನಿಂಗ್ಸ್ ನಲ್ಲೂ ತನ್ನ ಕೈಚಳಕ ತೋರಿದ್ದು, ರಿಷಭ್ ಪಂತ್(2ರನ್) ಸಹಿತ ನಾಲ್ಕು ವಿಕೆಟ್ ಗಳನ್ನು ಉರುಳಿಸಿ ಗೆಲುವಿನ ರೂವಾರಿಯಾದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಸತತ ಎರಡು ವಿಕೆಟ್ ಗಳನ್ನು ಉರುಳಿಸಿದ ಕೇಶವ ಮಹಾರಾಜ್ ದಕ್ಷಿಣ ಆಫ್ರಿಕಾದ ಗೆಲುವಿನ ಹಾದಿ ಸುಗಮಗೊಳಿಸಿದರು. ಮಹಾರಾಜ್(2-37) ಮುಹಮ್ಮದ್ ಸಿರಾಜ್(0)ವಿಕೆಟನ್ನು ಉರುಳಿಸಿದ ತಕ್ಷಣ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಪಾಳಯಲ್ಲಿ ಸಂಭ್ರಮ ಮುಗಿಲುಮುಟ್ಟಿತು. ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡವು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. 2ನೇ ಟೆಸ್ಟ್ಪಂದ್ಯವು ನ.22ರಿಂದ ಗುವಾಹಟಿಯಲ್ಲಿ ಆರಂಭವಾಗಲಿದೆ.
ವಾಶಿಂಗ್ಟನ್ ಸುಂದರ್ ರನ್ ಚೇಸ್ ವೇಳೆ ಭಾರತದ ಇನಿಂಗ್ಸ್ ಆಧರಿಸಲು ಯತ್ನಿಸಿದರು. ಆದರೆ ಮರ್ಕ್ರಮ್ ಆಫ್ ಸ್ಪಿನ್ ಬೌಲಿಂಗ್ಗೆ 31 ರನ್ ಗೆ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್ 17 ಎಸೆತಗಳಲ್ಲಿ 26 ರನ್ ಗಳಿಸಿ ಔಟಾಗುವ ಮೊದಲು ಮಹಾರಾಜ್ ಬೌಲಿಂಗ್ ನಲ್ಲಿ ಎರಡು ಸಿಕ್ಸರ್ ಗಳನ್ನು ಸಿಡಿಸಿದರು.
ಭೋಜನ ವಿರಾಮಕ್ಕೆ ಮೊದಲೇ ಮಾರ್ಕೊ ಜಾನ್ಸನ್ ಭಾರತದ ಆರಂಭಿಕ ಬ್ಯಾಟರ್ ಗಳಾದ ಯಶಸ್ವಿ ಜೈಸ್ವಾಲ್(0)ಹಾಗೂ ಕೆ.ಎಲ್.ರಾಹುಲ್(1)ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಆಗ ಭಾರತ 1 ರನ್ ಗೆ 2 ವಿಕೆಟ್ ಗಳನ್ನು ಕಳೆದುಕೊಂಡಿತು.
ಧ್ರುವ ಜುರೆಲ್(13 ರನ್), ಪಂತ್(2ರನ್), ರವೀಂದ್ರ ಜಡೇಜ(18 ರನ್), ಕುಲದೀಪ ಯಾದವ್(1 ರನ್) ನಿರೀಕ್ಷಿತ ಪ್ರದರ್ಶನ ನೀಡದೆ ನೆರೆದಿದ್ದ ಪ್ರೇಕ್ಷಕರನ್ನು ಭಾರೀ ನಿರಾಸೆಗೊಳಿಸಿದರು.
ದಕ್ಷಿಣ ಆಫ್ರಿಕಾ ಪರ ಹಾರ್ಮರ್ ಯಶಸ್ವಿ ಪ್ರದರ್ಶನ ನೀಡಿದರೆ, ಜಾನ್ಸನ್(2-15)ಹಾಗೂ ಮಹಾರಾಜ್(2-37)ತಲಾ ಎರಡು ವಿಕೆಟ್ ಗಳನ್ನು ಪಡೆದರು.
►ದಕ್ಷಿಣ ಆಫ್ರಿಕಾ 153 ರನ್: ಇದಕ್ಕೂ ಮೊದಲು 7 ವಿಕೆಟ್ ಗಳ ನಷ್ಟಕ್ಕೆ 93 ರನ್ ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡವು ನಾಯಕ ಟೆಂಬಾ ಬವುಮಾ(ಔಟಾಗದೆ 55 ರನ್, 136 ಎಸೆತ, 4 ಬೌಂಡರಿ)ಏಕಾಂಗಿ ಹೋರಾಟದ ನೆರವಿನಿಂದ ಒಟ್ಟು 153 ರನ್ ಗಳಿಸುವಲ್ಲಿ ಶಕ್ತವಾಯಿತು.
29 ರನ್ ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ಬವುಮಾ ಕಡಿಮೆ ಮೊತ್ತದ ಪಂದ್ಯದಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ಕಾರ್ಬಿನ್ ಬಾಷ್(25 ರನ್, 37 ಎಸೆತ)ಅವರೊಂದಿಗೆ 8ನೇ ವಿಕೆಟ್ಗೆ 44 ರನ್ ಜೊತೆಯಾಟದಲ್ಲಿ ಭಾಗಿಯಾದ ಬವುಮಾ ಭಾರತೀಯ ಬೌಲರ್ ಗಳಿಗೆ ನಿರಾಶೆಗೊಳಿಸಿದರು. ಬಾಷ್ ವಿಕೆಟನ್ನು ಕಬಳಿಸಿದ ಜಸ್ಪ್ರಿತ್ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸಿದರು. ಬವುಮಾ 122 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಮುಹಮ್ಮದ್ ಸಿರಾಜ್(2-2) ಅವರು ಹಾರ್ಮರ್(7ರನ್)ಹಾಗೂ ಮಹಾರಾಜ್(0)ವಿಕೆಟ್ ಗಳನ್ನು ನಾಲ್ಕು ಎಸೆತಗಳಲ್ಲಿ ಉರುಳಿಸಿ ದಕ್ಷಿಣ ಆಫ್ರಿಕಾ ಇನಿಂಗ್ಸ್ನ್ನು 153 ರನ್ ಗೆ ನಿಯಂತ್ರಿಸಿದರು. ರವೀಂದ್ರ ಜಡೇಜ 50 ರನ್ ಗೆ 4 ವಿಕೆಟ್ ಗಳನ್ನು ಪಡೆದರು.
ಶುಕ್ರವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡು ತನ್ನ ಮೊದಲ ಇನಿಂಗ್ಸ್ ನಲ್ಲಿ 159 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ತಂಡವು 2ನೇ ದಿನದಾಟದಲ್ಲಿ ಪುಟಿದೆದ್ದಿತ್ತು. ಶನಿವಾರ ಭಾರತ ತಂಡವನ್ನು 189 ರನ್ ಗೆ ನಿಯಂತ್ರಿಸಿದ ದಕ್ಷಿಣ ಆಫ್ರಿಕಾ ಕೇವಲ 30 ರನ್ ಹಿನ್ನಡೆ ಕಂಡಿತು.
ದಕ್ಷಿಣ ಆಫ್ರಿಕಾ ತಂಡವು ಕಾಗಿಸೊ ರಬಾಡ ಅನುಪಸ್ಥಿತಿಯಲ್ಲೂ ಹಾರ್ಮರ್ ಹಾಗೂ ಜಾನ್ಸನ್(ಒಟ್ಟು 5 ವಿಕೆಟ್)ಶಿಸ್ತುಬದ್ದ ಬೌಲಿಂಗ್ ಸಹಾಯದಿಂದ ಮೂರೇ ದಿನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದೆ.







