ಮೊದಲ ಟೆಸ್ಟ್ | ದಿನೇಶ್ ಚಾಂಡಿಮಾಲ್ಗೆ ಭುಜ, ಕುತ್ತಿಗೆಗೆ ಗಾಯ

ದಿನೇಶ್ ಚಾಂಡಿಮಾಲ್ | Photo Credit : PTI
ಗಾಲೆ, ಆ.18: ಗಾಲೆ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಭಾರತದ ಎರಡನೇ ಇನಿಂಗ್ಸ್ ವೇಳೆ ಬೌಂಡರಿ ಉಳಿಸುವ ಪ್ರಯತ್ನದಲ್ಲಿದ್ದಾಗ ಕೆಳಗೆ ಬಿದ್ದು ಭುಜ ಹಾಗೂ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದ ಶ್ರೀಲಂಕಾದ ಬ್ಯಾಟರ್ ದಿನೇಶ್ ಚಾಂಡಿಮಾಲ್ರನ್ನು ಮುನ್ನಚ್ಚರಿಕೆಯ ಕ್ರಮವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಭಾರತದ ಎರಡನೇ ಇನಿಂಗ್ಸ್ನ ನಾಲ್ಕನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಕೆ.ಎಲ್.ರಾಹುಲ್ ಹೊಡೆತವನ್ನು ತಡೆಯಲು ಡೀಪ್ಮಿಡ್ವಿಕೆಟ್ನತ್ತ ಓಡಿದ ಚಾಂಡಿಮಾಲ್ ಎರಡು ರನ್ ಉಳಿಸುವಲ್ಲಿ ಶಕ್ತರಾದರು. ಆದರೆ ಆಯತಪ್ಪಿ ಬಿದ್ದಾಗ ಗಾಯಗೊಂಡಿದ್ದಾರೆ.
ಘಟನೆಯ ನಂತರ ಶ್ರೀಲಂಕಾ ಬ್ಯಾಟರ್ನ ಬಲ ಭುಜ, ತಲೆ ಹಾಗೂ ಕುತ್ತಿಗೆಗೆ ಗಾಯವಾಗಿದೆ. ಶ್ರೀಲಂಕಾದ ತಂಡದ ವೈದ್ಯರು ಹಾಗೂ ಫಿಸಿಯೊಥೆರಪಿಸ್ಟ್ ಮೈದಾನದೊಳಗೆ ದಿನೇಶ್ರನ್ನು ತಪಾಸಣೆ ನಡೆಸಿದರು. ಮುನ್ನಚ್ಚರಿಕೆಯ ಸ್ಕ್ಯಾನಿಂಗ್ಗಾಗಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಶ್ರೀಲಂಕಾದ ಎರಡನೇ ಇನಿಂಗ್ಸ್ನಲ್ಲಿ ಮೂರನೇ ಕ್ರಮಾಂಕದಲ್ಲಿ ದಿನೇಶ್ ಬದಲಿಗೆ ಪಸಿಂದು ಸೂರ್ಯಬಂಡಾರ ಬ್ಯಾಟಿಂಗ್ ಮಾಡಿದರು. ಆದರೆ ಅವರು ಶೂನ್ಯಕ್ಕೆ ಔಟಾದರು.




