ಮೊದಲ ಟೆಸ್ಟ್ | ಸತತ ಐದು ಓವರ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಜಸ್ಟಿನ್ ಗ್ರೀವ್ಸ್

ಜಸ್ಟಿನ್ ಗ್ರೀವ್ಸ್ | Photo Credit : X
ಟರೌಬಾ, ಜು.28: ವೆಸ್ಟ್ಇಂಡೀಸ್ ಆಲ್ರೌಂಡರ್ ಜಸ್ಟಿನ್ ಗ್ರೀವ್ ಸತತ ಐದು ಮೇಡನ್ ಓವರ್ನಲ್ಲಿ ಐದು ವಿಕೆಟ್ಗಳನ್ನು ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡು ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದರು.
32ರ ಹರೆಯದ ಗ್ರೀವ್ಸ್ ಮೂರನೇ ದಿನವಾದ ಸೋಮವಾರ ಪಾಕಿಸ್ತಾನದ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ 27 ರನ್ಗೆ ಐದು ವಿಕೆಟ್ ಗೊಂಚಲು ಪಡೆದು ಈ ಸಾಧನೆ ಮಾಡಿದರು. ಈ ಮೂಲಕ ಪಂದ್ಯವು ಆತಿಥೇಯರತ್ತ ವಾಲುವಲ್ಲಿ ನೆರವಾದರು.
ಗ್ರೀವ್ಸ್ ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ 2016ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಸತತ ನಾಲ್ಕು ಓವರ್ಗಳಲ್ಲಿ ಗಳಿಸಿದ ವಿಕೆಟ್ ದಾಖಲೆಯನ್ನು ಮುರಿದರು.
ತನ್ನ 17ನೇ ಟೆಸ್ಟ್ ಪಂದ್ಯವನ್ನಾಡಿದ ಬಾರ್ಬಡೋಸ್ ಆಟಗಾರ ಗ್ರೀವ್ಸ್ ತನ್ನ ಚೊಚ್ಚಲ ಐದು ವಿಕೆಟ್ ಗೊಂಚಲು ಕಬಳಿಸಿ ವೆಸ್ಟ್ಇಂಡೀಸ್ನ ಮೊದಲ ಇನಿಂಗ್ಸ್ ಮೊತ್ತ 311ಕ್ಕೆ ಉತ್ತರಿಸುತ್ತಿದ್ದ ಪಾಕಿಸ್ತಾನ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 282 ರನ್ಗೆ ನಿಯಂತ್ರಿಸಿದರು. ತನ್ನ ತಂಡಕ್ಕೆ 29 ರನ್ ಮುನ್ನಡೆ ಒದಗಿಸಿಕೊಟ್ಟರು.
ಪಾಕಿಸ್ತಾನ ತಂಡವು 3 ವಿಕೆಟ್ಗಳ ನಷ್ಟಕ್ಕೆ 244 ರನ್ ಗಳಿಸಿ ಸುಸ್ಥಿಯಲ್ಲಿತ್ತು. ಶಾನ್ ಮಸೂದ್ 184 ಎಸೆತಗಳಲ್ಲಿ 109 ರನ್ ಗಳಿಸಿ ಗ್ರೀವ್ಸ್ಗೆ ವಿಕೆಟ್ ಒಪ್ಪಿಸಿದರು. ಆ ನಂತರ ಸತತ ಓವರ್ಗಳಲ್ಲಿ ಆಮಿರ್ ಜಮಾಲ್(3), ಅಲಿ ಉಸ್ಮಾನ್ (0) ಹಾಗೂ ಮುಹಮ್ಮದ್ ರಿಝ್ವಾನ್ (12)ವಿಕೆಟ್ಗಳನ್ನು ಉರುಳಿಸಿದರು. ಮುಹಮ್ಮದ್ ಅಬ್ಬಾಸ್(0) ವಿಕೆಟನ್ನು ಉರುಳಿಸಿದ ಗ್ರೀವ್ಸ್ ಐತಿಹಾಸಿಕ ಸಾಧನೆ ಮಾಡಿದರು.
ದಿನದಾಟದಂತ್ಯಕ್ಕೆ ತಿರುಗೇಟು ನೀಡಿರುವ ಪಾಕಿಸ್ತಾನ ತಂಡವು ವೆಸ್ಟ್ಇಂಡೀಸ್ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ 126 ರನ್ಗೆ ಏಳು ವಿಕೆಟ್ ಕಳೆದುಕೊಳ್ಳುವಂತೆ ಮಾಡಿದೆ. ಆತಿಥೇಯರು 155 ರನ್ ಮುನ್ನಡೆಯಲ್ಲಿದ್ದಾರೆ.






