ಮೊದಲ ಟೆಸ್ಟ್ | ಪಡಿಕ್ಕಲ್ 167 ರನ್, ಧ್ರುವ ಜುರೆಲ್ ಅರ್ಧಶತಕ : ಮಳೆ ಬಾಧಿತ ಪಂದ್ಯದಲ್ಲಿ ಭಾರತ 460/9

ದೇವದತ್ತ ಪಡಿಕ್ಕಲ್ |Photo Credit : PTI
ಗಾಲೆ, ಆ.16: ದೇವದತ್ತ ಪಡಿಕ್ಕಲ್(167 ರನ್, 230 ಎಸೆತ, 15 ಬೌಂಡರಿ, 1 ಸಿಕ್ಸರ್), ಕೆ.ಎಲ್.ರಾಹುಲ್(82 ರನ್, 175 ಎಸೆತ, 5 ಬೌಂಡರಿ)ಹಾಗೂ ಧ್ರುವ ಜುರೆಲ್(51 ರನ್, 68 ಎಸೆತ, 4 ಬೌಂಡರಿ, 1 ಸಿಕ್ಸರ್)ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ರವಿವಾರ ಮಳೆ ಬಾಧಿತ ಮೊದಲ ಟೆಸ್ಟ್ನ ಎರಡನೇ ದಿನದಾಟದಂತ್ಯಕ್ಕೆ ಭಾರತ ತಂಡವು ಶ್ರೀಲಂಕಾದ ವಿರುದ್ಧ 9 ವಿಕೆಟ್ಗಳ ನಷ್ಟಕ್ಕೆ 460 ರನ್ ಗಳಿಸಿ ಮೇಲುಗೈ ಸಾಧಿಸಿದೆ.
ಪಡಿಕ್ಕಲ್ ಹಾಗೂ ರಿಷಭ್ ಪಂತ್ 2 ವಿಕೆಟ್ ನಷ್ಟಕ್ಕೆ 288 ರನ್ನಿಂದ ಭಾರತದ ಮೊದಲ ಇನಿಂಗ್ಸ್ ಮುಂದುವರಿಸಿದರು. ಪಂತ್ ನಿನ್ನೆಯ ಮೊತ್ತಕ್ಕೆ 12 ರನ್ ಸೇರಿಸುವಷ್ಟರಲ್ಲಿ ನುವಾಂಥಗೆ ವಿಕೆಟ್ ಒಪ್ಪಿಸಿದರು.
ಶನಿವಾರ ಗಾಯಾಳು ನಿವೃತ್ತಿಯಾಗಿದ್ದ ರಾಹುಲ್ ಇಂದು ಬ್ಯಾಟಿಂಗ್ ಮುಂದುವರಿಸಿದರು. ತನ್ನ ಉತ್ತಮ ಆರಂಭವನ್ನು ಶತಕವನ್ನಾಗಿಸಲು ವಿಫಲವಾದ ರಾಹುಲ್ ನುವಾಂಥ ಬೌಲಿಂಗ್ನಲ್ಲಿ ನಿಶಾನ್ ಫೆರ್ನಾಂಡೊ ಅವರ ಚುರುಕಿನ ಕ್ಯಾಚ್ಗೆ ವಿಕೆಟ್ ಒಪ್ಪಿಸಿದರು.
ಪಡಿಕ್ಕಲ್ ಇನಿಂಗ್ಸ್ಗೆ ಎಡಗೈ ಸ್ಪಿನ್ನರ್ ಜಯಸೂರ್ಯ ತೆರೆ ಎಳೆದಾಗ ಭಾರತ ತಂಡವು 357 ರನ್ಗೆ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಆಲ್ರೌಂಡರ್ ರವೀಂದ್ರ ಜಡೇಜ(13 ರನ್), ಮುಹಮ್ಮದ್ ಸಿರಾಜ್(11 ರನ್) ಹಾಗೂ ಮಾನವ್ ಸುಥರ್(24 ರನ್)ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಧ್ರುವ ಜುರೆಲ್ ಅರ್ಧಶತಕ ಗಳಿಸಿ ಭಾರತದ ಸ್ಕೋರನ್ನು 430ರ ಗಡಿ ದಾಟಿಸಿದರು.
ಭಾರತವು 377 ರನ್ಗೆ ಆರು ವಿಕೆಟ್ ಕಳೆದುಕೊಂಡಾಗ ಮಾನವ್ ಸುಥರ್ ಜೊತೆ ಕೈಜೋಡಿಸಿದ ಜುರೆಲ್ 55 ರನ್ ಜೊತೆಯಾಟ ನಡೆಸಿದರು. ಕುಲದೀಪ ಯಾದವ್(ಔಟಾಗದೆ 12)ಹಾಗೂ ಪ್ರಸಿದ್ದ ಕೃಷ್ಣ(1)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಶ್ರೀಲಂಕಾದ ಬೌಲಿಂಗ್ ವಿಭಾಗದಲ್ಲಿ ಪ್ರಭಾತ್ ಜಯಸೂರ್ಯ(4-109)ಹಾಗೂ ಕೇಶಾರ ನುವಾಂಥ(3-175)ಏಳು ವಿಕೆಟ್ಗಳನ್ನು ಹಂಚಿಕೊಂಡರು.
ಭಾರತ ತಂಡವು ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುವುದನ್ನು ಮುಂದುವರಿಸಿದರೆ, ಶ್ರೀಲಂಕಾ ಒಂದಷ್ಟು ಪ್ರತಿ ಹೋರಾಟವನ್ನು ನೀಡಿತು.
ನಿರಂತರ ಮಳೆಯಿಂದಾಗಿ ಎರಡನೇ ದಿನದಾಟದಲ್ಲಿ ಕೇವಲ 43 ಓವರ್ಗಳ ಪಂದ್ಯ ಆಡಲು ಸಾಧ್ಯವಾಗಿದೆ. ಮಧ್ಯಾಹ್ನ 2:35ರ ಸುಮಾರಿಗೆ ಪಂದ್ಯವು ಪುನರಾರಂಭವಾಯಿತು. ಔಟಾಗದೆ 131 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಪಡಿಕ್ಕಲ್ 150 ರನ್ ಗಡಿ ದಾಟಿದರು. 167 ರನ್ ಗಳಿಸಿದ್ದಾಗ ಎಡಗೈ ಸ್ಪಿನ್ನರ್ ಜಯಸೂರ್ಯ ಬೌಲಿಂಗ್ನಲ್ಲಿ ವಿಕೆಟ್ಕೀಪರ್ ಡಿಕ್ವೆಲ್ಲಾರಿಂದ ಸ್ಟಂಪ್ಔಟಾದರು.






