ಮೊದಲ ಟೆಸ್ಟ್: ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ

Photo Credit : X
ಜೋಹಾನ್ಸ್ಬರ್ಗ್: ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ಅವರ ಆರು ವಿಕೆಟ್ ಗೊಂಚಲು(6-51)ನೆರವಿನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಪ್ರಥಮ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 9 ವಿಕೆಟ್ಗಳ ಅಂತರದಿಂದ ಸುಲಭವಾಗಿ ಮಣಿಸಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಪ್ರವಾಸಿ ಬಾಂಗ್ಲಾದೇಶ ತಂಡವು ಐದನೇ ಹಾಗೂ ಕೊನೆಯ ದಿನವಾದ ಗುರುವಾರ 5 ವಿಕೆಟ್ಗಳ ನಷ್ಟಕ್ಕೆ 100 ರನ್ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿತು. ನಿನ್ನೆಯ ಮೊತ್ತಕ್ಕೆ ಕೇವಲ 68 ರನ್ ಸೇರಿಸಿ ದಕ್ಷಿಣ ಆಫ್ರಿಕಾದ ಗೆಲುವಿಗೆ ಕೇವಲ 12 ರನ್ ಗುರಿ ನೀಡಿತು.
ದಕ್ಷಿಣ ಆಫ್ರಿಕಾ ತಂಡವ ಕೇವಲ 1.3 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮಾರ್ಕಸ್ ಅಕರ್ಮನ್(0) ಮೊದಲ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಈ ಗೆಲುವಿನ ಮೂಲಕ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನಕ್ಕೇರಿದೆ.
ಕೊನೆಯ ದಿನದಾಟದಲ್ಲಿ ರಬಾಡಗೆ ವಿಕೆಟ್ ಒಪ್ಪಿಸುವ ಮೊದಲು ಲಿಟನ್ ದಾಸ್(39 ರನ್) ಹಾಗೂ ಮುಶ್ಫಿಕುರ್ರಹೀಂ(22 ರನ್) ಅವರು ಏಳು ಓವರ್ಗಳಲ್ಲಿ 34 ರನ್ ಗಳಿಸಿದ್ದರು.
ಹಾರ್ಮರ್ ಬಾಂಗ್ಲಾದೇಶದ ಕೊನೆಯ ನಾಲ್ಕು ವಿಕೆಟ್ಗಳನ್ನು ಉರುಳಿಸಿದರು.
ಉಭಯ ತಂಡಗಳು ಸೋಮವಾರದಿಂದ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಸೆಂಚೂರಿಯನ್ಗೆ ತೆರಳಲಿವೆ.
ದಕ್ಷಿಣ ಆಫ್ರಿಕಾದ ನಾಯಕ ಬವುಮಾ ಜೋಹಾನ್ಸ್ಬರ್ಗ್ನಲ್ಲಿ ಬ್ಯಾಟಿಂಗ್ನ ವೇಳೆ ಗಾಯಗೊಂಡಿದ್ದು, ಎರಡನೇ ಟೆಸ್ಟ್ ಪಂದ್ಯದಿಂದ ವಂಚಿತರಾಗಲಿದ್ದಾರೆ.
ಪಂದ್ಯದಲ್ಲಿ ಒಟ್ಟು ಎಂಟು ವಿಕೆಟ್ಗಳನ್ನು (5/70, 3/48)ಪಡೆದಿರುವ ವೇಗದ ಬೌಲರ್ ಕಾಗಿಸೊ ರಬಾಡ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.






