ಮೊದಲ ಟೆಸ್ಟ್ : ಭಾರತದ ಸ್ಪಿನ್ ಮೋಡಿಗೆ ವಿಂಡೀಸ್ ತತ್ತರ, 150 ರನ್ ಗೆ ಆಲೌಟ್

ಡೊಮಿನಿಕಾ: ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರ ಸ್ಪಿನ್ ಮೋಡಿಗೆ ತತ್ತರಿಸಿದ ಆತಿಥೇಯ ವೆಸ್ಟ್ಇಂಡೀಸ್ ಪ್ರಥಮ ಟೆಸ್ಟ್ನ ಮೊದಲ ದಿನದಾಟವಾದ ಬುಧವಾರ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಸಿ ಆಲೌಟಾಗಿದೆ. ಅಶ್ವಿನ್ ಹಾಗೂ ಜಡೇಜ ಒಟ್ಟಿಗೆ 8 ವಿಕೆಟ್ ಳನ್ನು ಉರುಳಿಸಿ ವಿಂಡೀಸ್ಗೆ ಸಿಂಹಸ್ವಪ್ನರಾದರು. ದಿನದಾಟದುದ್ದಕ್ಕೂ ರನ್ ಗಳಿಸಲು ಪರದಾಟ ನಡೆಸಿದ ವಿಂಡೀಸ್ಮೊದಲೆರಡು ಸೆಶನ್ನಲ್ಲಿ ತಲಾ 4 ವಿಕೆಟ್ಗಳನ್ನು ಕಳೆದುಕೊಂಡಿದ್ದು, ಕೊನೆಯ ಸೆಶನ್ನಲ್ಲಿ ತಿರುಗೇಟು ನೀಡಲು ಯತ್ನಿಸಿತು. ಕಳೆದ ತಿಂಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನಿರಾಸೆಗೊಳಿಸಿದ್ದ ಅಶ್ವಿನ್ 33ನೇ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿ ವಿಂಡೀಸ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಮುಖ್ಯ ಪಾತ್ರವಹಿಸಿದರು.
ಅಶ್ವಿನ್ 24.3 ಓವರ್ಗಳಲ್ಲಿ 60 ರನ್ಗೆ 5 ವಿಕೆಟ್ಗಳನ್ನು ಕಬಳಿಸಿದರೆ ಜಡೇಜ 14 ಓವರ್ಗಳಲ್ಲಿ 26 ರನ್ಗೆ 3 ವಿಕೆಟ್ಗಳನ್ನು ಕಬಳಿಸಿ ಅಶ್ವಿನ್ಗೆ ಸಾಥ್ ನೀಡಿದರು. ವಿಂಡೀಸ್ ಪರ ಚೊಚ್ಚಲ ಪಂದ್ಯವನ್ನಾಡಿದ್ದ ಅಲಿಕ್ ಅಥಾನಾಝ್(47 ರನ್,99 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಉಳಿದ ಆಟಗಾರರು ವಿಫಲರಾದರು. ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತಕ್ಕೆ ನಾಯಕ ರೋಹಿತ್ ಶರ್ಮಾ(ಔಟಾಗದೆ 30, 65 ಎಸೆತ) ಹಾಗೂ ಚೊಚ್ಚಲ ಪಂದ್ಯವನ್ನಾಡಿದ ಯಶಸ್ವಿ ಜೈಸ್ವಾಲ್
(ಔಟಾಗದೆ 40, 73 ಎಸೆತ)ಮೊದಲ ವಿಕೆಟ್ ಗೆ 80 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.ವಿಂಡೀಸ್ ಇನಿಂಗ್ಸ್ ಗಿಂತ ಭಾರತ ಕೇವಲ 70 ರನ್ ಹಿನ್ನಡೆಯಲ್ಲಿದೆ.
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಅರ್ಧಶತಕ, ಭಾರತ ಭರ್ಜರಿ ಆರಂಭ
ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದಿದೆ.
ವೆಸ್ಟ್ ಇಂಡೀಸ್ ತಂಡವನ್ನು ಮೊದಲ ದಿನದಾಟವಾದ ಬುಧವಾರ ಕೇವಲ 150 ರನ್ಗೆ ನಿಯಂತ್ರಿಸಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ್ದ ಭಾರತ 2ನೇ ದಿನವಾದ ಗುರುವಾರ ಭೋಜನ ವಿರಾಮದ ವೇಳೆಗೆ 55 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 146 ರನ್ ಗಳಿಸಿದೆ. ವಿಂಡೀಸ್ ಸ್ಕೋರ್ಗಿಂತ 4 ರನ್ ಹಿನ್ನಡೆಯಲ್ಲಿದೆ. ರೋಹಿತ್ ಹಾಗೂ ಜೈಸ್ವಾಲ್ 2021ರ ಡಿಸೆಂಬರ್ ನಂತರ ಮೊದಲ ವಿಕೆಟ್ನಲ್ಲಿ ಶತಕದ ಜೊತೆಯಾಟ ನಡೆಸಿದ ಭಾರತದ ಓಪನರ್ಗಳೆಂಬ ಕೀರ್ತಿಗೆ ಭಾಜನರಾದರು. ನಾಯಕ ರೋಹಿತ್ 106 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 15ನೇ ಟೆಸ್ಟ್ ಅರ್ಧಶತಕ ಸಿಡಿಸಿದರು. ಚೊಚ್ಚಲ ಪಂದ್ಯವನ್ನಾಡಿದ ಜೈಸ್ವಾಲ್ ಅವರು ಜೋಸೆಫ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿ 104 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಮೊದಲ ದಿನದಾಟದಂತ್ಯಕ್ಕೆ ಭಾರತವು ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿತ್ತು. ಯಶಸ್ವಿ ಔಟಾಗದೆ 40 ಹಾಗೂ ರೋಹಿತ್ ಔಟಾಗದೆ 30 ರನ್ ಗಳಿಸಿದ್ದರು.







