ಪ್ಲೇಆಫ್ ಹಂತಕ್ಕೇರಲು ವಿಫಲ: ಐವರು ನಾಯಕರಿಗೆ ತೂಗುಗತ್ತಿ

ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಋತುರಾಜ್ ಗಾಯಕ್ವಾಡ್ Photo: x.com/FirstpostSports
ಹೊಸದಿಲ್ಲಿ: ಪ್ರಸಕ್ತ ವರ್ಷದ ಐಪಿಎಲ್ ನಲ್ಲಿ ಪ್ಲೇಆಫ್ ಹಂತಕ್ಕೇರಲು ವಿಫಲವಾದ ಆರು ತಂಡಗಳ ಪೈಕಿ ಐದು ತಂಡಗಳ ನಾಯಕರು ಇದೇ ಹೊಣೆಗಾರಿಕೆಯಲ್ಲಿ ಮುಂದುವರಿಯುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಎದುರಾಗಿವೆ. ಆರು ತಂಡಗಳ ಪೈಕಿ ನಾಲ್ಕು ತಂಡಗಳು ಸತತ ಎರಡನೇ ವರ್ಷ ಪ್ಲೇಆಫ್ ಹಂತದಿಂದ ಹೊರಬಿದ್ದಿರುವುದು ಪ್ರಮುಖ ಕಾರಣ. 2025ರಲ್ಲಿ ಬಹುತೇಕ ಫೈನಲ್ ಗೇರಿದ್ದ ತಂಡ 2026ರ ಸೀಸನ್ ನಲ್ಲಿ ಕೊನೆಯ ಸ್ಥಾನದಲ್ಲಿದೆ. ಇದರಿಂದಾಗಿ ಐದು ತಂಡಗಳ ನಾಯಕರ ಸ್ಥಾನಕ್ಕೆ ಸಂಚಕಾರ ಬರುವ ಸಾಧ್ಯತೆಗಳಿವೆ.
ಎಲ್ಎಸ್ ಜಿ ತಂಡದ ನಾಯಕ ರಿಷಭ್ ಪಂತ್ 27 ಕೋಟಿ ರೂಪಾಯಿಗೆ ಖರೀದಿಯಾಗಿ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎನಿಸಿಕೊಂಡವರು. ಅವರ ನಾಯಕತ್ವದಲ್ಲಿ ತಂಡ ಕಳೆದ ವರ್ಷ ಏಳನೇ ಸ್ಥಾನದಲ್ಲಿದ್ದರೆ, ಈ ಬಾರಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.
ಮತ್ತೊಬ್ಬ ನಾಯಕ ಹಾರ್ದಿಕ್ ಪಾಂಡ್ಯ. 2024ರಲ್ಲಿ ತಂಡಕ್ಕೆ ಮರಳಿದ ಅವರು ಐದು ಬಾರಿ ಐಪಿಎಲ್ ಗೆದ್ದುಕೊಟ್ಟ ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ಆಯ್ಕೆಯಾದರು. 2025ರಲ್ಲಿ ಟಿ20 ವಿಶ್ವಕಪ್ ನಲ್ಲಿ ಭಾರತ ಗೆಲುವು ಸಾಧಿಸಲು ನೀಡಿದ ಕೊಡುಗೆ ಹಾಗೂ ಎಂಐ ತಂಡ ಪ್ಲೇಆಫ್ ಗೆ ಮುನ್ನಡೆದ ಹಿನ್ನೆಲೆಯಲ್ಲಿ ನಾಯಕತ್ವ ಉಳಿಸಿಕೊಂಡರು. ಆದರೆ ಇದೀಗ ಮತ್ತೆ ನಾಯಕತ್ವಕ್ಕೆ ಸಂಚಕಾರದ ಸಾಧ್ಯತೆ ಕಾಣಿಸುತ್ತಿದೆ.
ಎಂ.ಎಸ್.ಧೋನಿ ಸ್ಥಾನವನ್ನು ತುಂಬಿದ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಈ ಬಾರಿಯೂ ಎದುರಿಸಿತು. ಧೋನಿ ನಾಯಕತ್ವದಲ್ಲಿ ಸಿಎಸ್ ಕೆಗೆ ಪ್ಲೇಆಫ್ ಹಂತಕ್ಕೇರುವುದು ಹವ್ಯಾಸವಾಗಿ ಬೆಳೆದಿತ್ತು. 2008ರಿಂದ 2019ರವರೆಗೆ ಪ್ರತಿ ಸೀಸನ್ ನಲ್ಲೂ ಪ್ಲೇಆಫ್ ಹಂತಕ್ಕೇರಿತ್ತು. 2021 ಹಾಗೂ 2023ರಲ್ಲಿ ಸಿಎಸ್ ಕೆ ಪ್ರಶಸ್ತಿ ಗೆದ್ದರೂ ಅಲ್ಲಿಂದ ಬಹುದೂರ ಸಾಗಿದೆ. ಗಾಯಕ್ವಾಡ್ ಪ್ರಸಕ್ತ ವರ್ಷ ಕೇವಲ 337 ರನ್ ಕಲೆಹಾಕಿದ್ದಾರೆ.
ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಐಪಿಎಲ್ ಇತಿಹಾಸದಲ್ಲಿ ಕನಿಷ್ಠ ಗೆಲುವಿನ ದರ ಹೊಂದಿರುವ ನಾಯಕ ಎಂಬ ಅನಪೇಕ್ಷಿತ ದಾಖಲೆ ನಿರ್ಮಿಸಿದ್ದಾರೆ. 2024ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಸತತ ಎರಡು ಬಾರಿ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿರುವುದು ಅವರ ಮುಂದುವರಿಕೆ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ಡಿಸಿ ನಾಯಕ ಅಕ್ಷರ್ ಪಟೇಲ್ ಕೂಡಾ ಸತತ ಎರಡನೇ ವರ್ಷ ತಂಡವನ್ನು ಪ್ಲೇಆಫ್ ಹಂತಕ್ಕೇರಿಸುವಲ್ಲಿ ವಿಫಲರಾಗಿದ್ದಾರೆ. ಅಕ್ಷರ್ ಪಟೇಲ್ ಬದಲು ಕೆ.ಎಲ್.ರಾಹುಲ್ ಅಥವಾ ಹೊಸಬರು ಈ ಹೊಣೆ ವಹಿಸಿಕೊಳ್ಳುತ್ತಾರೆಯೇ ಎಂಬ ಕುತೂಹಲ ಮೂಡಿದೆ.






