ಅಫ್ಘಾನಿಸ್ತಾನದ ಮಾಜಿ ವೇಗದ ಬೌಲರ್ ಶಾಪೂರ್ ಝದ್ರಾನ್ ನಿಧನ

ಶಾಪೂರ್ ಝದ್ರಾನ್ | Photo Credit : X \ @Angelo69Mathews
ಹೊಸದಿಲ್ಲಿ, ಜು.7: ಅಫ್ಘಾನಿಸ್ತಾನದ ಮಾಜಿ ವೇಗದ ಬೌಲರ್ ಶಾಪೂರ್ ಝದ್ರಾನ್ ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ನಿಧನರಾದರು. ತನ್ನ 39ನೇ ವಯಸ್ಸಿಗೆ ಕಾಲಿಡುವ ಮುನ್ನಾದಿನ ಕೊನೆಯುಸಿರೆಳೆದರು.
ರೋಗ ನಿರೋಧಕ ವ್ಯವಸ್ಥೆ ತೀವ್ರವಾಗಿ ಸಕ್ರಿಯಗೊಳ್ಳುವ ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆ ಎಚ್ಎಲ್ಎಚ್ನಿಂದ ಹಲವು ತಿಂಗಳುಗಳಿಂದ ಬಳಲುತ್ತಿದ್ದ ಝದ್ರಾನ್ ಅವರು ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಝದ್ರಾನ್ ನಿಧನದ ಸುದ್ದಿಯನ್ನು ದೃಢಪಡಿಸಿರುವ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು(ಎಸಿಬಿ) ಅಫ್ಘಾನಿಸ್ತಾನ ಕ್ರಿಕೆಟಿನ ಪ್ರವರ್ತಕರ ಪೈಕಿ ಒಬ್ಬರಾದ ಝದ್ರಾನ್ಗೆ ಗೌರವ ಸಲ್ಲಿಸಿದೆ.
ಅಂತರ್ರಾಷ್ಟ್ರೀಯ ವೇದಕೆಯಲ್ಲಿ ದೇಶದ ಭವಿಷ್ಯವನ್ನು ಪರಿವರ್ತಿಸಲು ಸಹಾಯ ಮಾಡಿದ ಮೊದಲ ತಲೆಮಾರಿನ ಅಫ್ಘಾನ್ ಕ್ರಿಕೆಟಿಗರ ಪೈಕಿ ಝದ್ರಾನ್ ಒಬ್ಬರು. ಎಡಗೈ ವೇಗ ಹಾಗೂ ಆಕ್ರಮಣಕಾರಿ ಬೌಲಿಂಗ್ಗೆ ಹೆಸರುವಾಸಿಯಾಗಿದ್ದ ಅವರು 2009 ಹಾಗೂ 2020ರ ನಡುವೆ 80 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದ್ದರು. 44 ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳು ಹಾಗೂ 36 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದರು.
ಅಫ್ಘಾನಿಸ್ತಾನ ತಂಡವು ಜಾಗತಿಕ ಸ್ಪರ್ಧೆಯಲ್ಲಿ ನಿಯಮಿತವಾಗಿ ಭಾಗವಹಿಸಲು ಪ್ರಮುಖ ಪಾತ್ರವಹಿಸಿದ್ದ ಝದ್ರಾನ್, ಐಸಿಸಿ ಕ್ರಿಕೆಟ್ ವಿಶ್ವಕಪ್ ಹಾಗೂ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಹಾಗೂ ಸ್ಪರ್ಧಿಸಲು ತನ್ನ ತಂಡಕ್ಕೆ ನೆರವಾಗಿದ್ದರು.
ಹಲವು ಸಮಯದಿಂದ ಕಾಯಿಲೆಯಿಂದ ಬಳಲುತ್ತಿದ್ದ ಝದ್ರಾನ್ ಕಳೆದ ವರ್ಷ ಅಕ್ಟೋಬರ್ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ್ದರು. ಮೇ ತಿಂಗಳಲ್ಲಿ ಅಫ್ಘಾನ್ ಸ್ಟಾರ್ಗಳಾದ ಮುಹಮ್ಮದ್ ನಬಿ ಹಾಗೂ ರಶೀದ್ ಖಾನ್ ಗ್ರೇಟರ್ ನೋಯ್ಡಾ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ವಿಚಾರಿಸಿದ್ದರು.






