ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮ್ಯಾಕ್ ಗಿಲ್ ಬಂಧನ

Photo: twitter/weRcricket
ಮೆಲ್ಬೋರ್ನ್: ಆಸ್ಟ್ರೇಲಿಯದ ಮಾಜಿ ಟೆಸ್ಟ್ ಆಟಗಾರ ಸ್ಟುವರ್ಟ್ ಮ್ಯಾಕ್ಗಿಲ್ರನ್ನು ಸಿಡ್ನಿಯಲ್ಲಿ ಮಂಗಳವಾರ ಬಂಧಿಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಕೊಕೇನ್ ಪೂರೈಕೆ ಸಂಚಿನಲ್ಲಿ ಭಾಗಿಯಾದ ಆರೋಪವನ್ನು ಹೊರಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ನಿವೃತ್ತ ಲೆಗ್ ಸ್ಪಿನ್ನರ್ ಎಪ್ರಿಲ್ 2021ರಲ್ಲಿ ಉತ್ತರ ಸಿಡ್ನಿಯಲ್ಲಿರುವ ಅವರ ಅಪಾರ್ಟ್ಮೆಂಟ್ನ ಹೊರಗೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪಿನಿಂದ ಅಪಹರಿಸಲ್ಪಟ್ಟ ನಂತರ ಬೇಹುಗಾರರ ಗಮನ ಸೆಳೆದಿದ್ದರು.
ಗುಂಪಿನ ಸದಸ್ಯರು ನನ್ನನ್ನು ನಗರದ ಹೊರ ವಲಯದಲ್ಲಿರುವ ಸ್ಥಳಕ್ಕೆ ಕರೆದೊಯ್ದು ಬೆತ್ತಲೆಯಾಗಿಸಿ ಥಳಿಸಿದ್ದರು. ಬಂದೂಕು ತೋರಿಸಿ ನನಗೆ ಬೆದರಿಕೆ ಹಾಕಿದ್ದರು. ಆ ನಂತರ ನನ್ನನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಬಿಡುಗಡೆ ಮಾಡಿದ್ದರು. ಘಟನೆಯಿಂದ ಸಣ್ಣಪುಟ್ಟ ಗಾಯವಾಗಿದ್ದು ವೈದ್ಯಕೀಯ ಉಪಚಾರದ ಅಗತ್ಯಬೀಳಲಿಲ್ಲ. ನಾನು ಏನೂ ತಪ್ಪು ಮಾಡಿಲ್ಲ. ನಾನು ಬಲಿಪಶುವಾಗಿದ್ದೇನೆ ಎಂದು 52 ವರ್ಷದ ಮ್ಯಾಕ್ಗಿಲ್ ಆಸ್ಟ್ರೇಲಿಯದ ರೇಡಿಯೊ ನೆಟ್ವರ್ಕ್ ಸೆನ್ಗೆ ಕಳೆದ ವರ್ಷ ತಿಳಿಸಿದ್ದರು.
ಘಟನೆಯ ಕುರಿತು ಎರಡು ವರ್ಷಗಳ ಸುದೀರ್ಘ ತನಿಖೆಯ ನಂತರ ಮ್ಯಾಕ್ಗಿಲ್ ಅಪಹರಣವು ಡ್ರಗ್ ಡೀಲ್ನಲ್ಲಿ ಅವರು ಶಾಮೀಲಾಗಿರುವುದಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ಈಗ ಆರೋಪಿಸಿದ್ದಾರೆ.
ತನಗೆ ಎಲ್ಲವೂ ಗೊತ್ತಿದ್ದರೂ ದೊಡ್ಡ ಪ್ರಮಾಣದಲ್ಲಿ ನಿಷೇಧಿತ ಡ್ರಗ್ ಪೂರೈಕೆಯಲ್ಲಿ ಮೆಕ್ಗಿಲ್ ಭಾಗವಹಿಸಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮ್ಯಾಕ್ಗಿಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಅಕ್ಟೋಬರ್ 26ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಪ್ರತಿಭಾವಂತ ಬೌಲರ್ ಎಂದೇ ಪ್ರಶಂಶಿಸಲ್ಪಟ್ಟಿರುವ ಮ್ಯಾಕ್ಗಿಲ್ ಆಸ್ಟ್ರೇಲಿಯದ ಪರ 44 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆದರೆ ದುರದೃಷ್ಟವಶಾತ್ ಅವರ ವೃತ್ತಿಜೀವನವು ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಎಂದೇ ಅನೇಕರಿಂದ ಶ್ಲಾಘನೆಗೆ ಒಳಗಾಗಿರುವ ಶೇನ್ ವಾರ್ನ್ ಎದುರು ಗಿಲ್ ಮಂಕಾಗಿ ಕಂಡುಬಂದಿತ್ತು.







