ನಸೀಮ್ ಶಾಗೆ ಭಾರಿ ದಂಡ: ಪಿಸಿಬಿ ವಿರುದ್ಧ ಮಾಜಿ ಕ್ರಿಕೆಟಿಗ ಬಹಿರಂಗ ಟೀಕೆ

PC: x.com/Reuters
ಲಾಹೋರ್: ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ಅವರಿಗೆ 20 ದಶಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಕ್ರಮವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ಕಟುವಾಗಿ ಟೀಕಿಸಿದ್ದಾರೆ. ಈ ಶಿಕ್ಷೆ "ವಿಪರೀತ ಹಾಗೂ ತಪ್ಪಿಸಬಹುದಾದದ್ದು" ಎಂದು ಅವರು ವಿಶ್ಲೇಷಿಸಿದ್ದಾರೆ.
ಆಟಗಾರ ತಪ್ಪನ್ನು ಒಪ್ಪಿಕೊಂಡ ಬಳಿಕ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿರುವುದು ವಿಪರೀತದ ಕ್ರಮ ಎಂದು ಯೂನಿಸ್ ಖಾನ್ ಹೇಳಿದ್ದಾರೆ. ಇಂಥ ಕ್ರಮ ಆಟಗಾರರ ಮನೋಸ್ಥೈರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)-2026ರ ಆರಂಭಿಕ ಪಂದ್ಯದ ವೇಳೆ ನಸೀಮ್ ಅಧಿಕೃತ ಎಕ್ಸ್ ಖಾತೆಯಿಂದ ಮಾಡಿದ ಪೋಸ್ಟ್ ಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ಈ ಪೋಸ್ಟನ್ನು ಇದೀಗ ಡಿಲೀಟ್ ಮಾಡಲಾಗಿದೆ. ಲಾಹೋರ್ ನ ಗದ್ದಾಫಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಝ್ ಅವರ ಉಪಸ್ಥಿತಿಯನ್ನು ಪ್ರಶ್ನಿಸುವ ರೀತಿಯಲ್ಲಿ ಈ ಪೋಸ್ಟ್ ಇತ್ತು.
ಪಿಎಸ್ಎಲ್ ಆರಂಭಿಕ ಪಂದ್ಯದ ಬಗೆಗಿನ ಪಿಸಿಬಿ ಅಪ್ಡೇಟ್ ಉಲ್ಲೇಖಿಸಿ ಮಾಡಲಾದ ಟ್ವೀಟ್ ನಲ್ಲಿ "ಲಾರ್ಡ್ಸ್ ನಲ್ಲಿ ರಾಣಿಯಂತೆ ಏಕೆ ಆಕೆಯನ್ನು ಉಪಚರಿಸಬೇಕಿತ್ತು?" ಎಂದು ಪ್ರಶ್ನಿಸಲಾಗಿತ್ತು. ಮರ್ಯಮ್ ನವಾಝ್ ಅವರಿಗೆ ನೀಡಿದ ವಿಐಪಿ ಗೌರವವನ್ನು ಪ್ರಶ್ನಿಸಿದ ಟ್ವೀಟ್ ಇದು ಎಂದು ವಿಶ್ಲೇಷಿಸಲಾಗಿತ್ತು. ಬಿಗಿ ಭದ್ರತೆಯೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದ ಅವರು, ಆಟಗಾರರ ಜತೆ ಸಂವಾದ ನಡೆಸಿದ್ದರು.
ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂಬ ಕಾರಣ ನೀಡಿ ತಕ್ಷಣವೇ ಟ್ವೀಟ್ ಡಿಲೀಟ್ ಮಾಡಿದ್ದರೂ, ಈ ವಿವರಣೆ ಪಿಸಿಬಿ ಅಧಿಕಾರಿಗಳಿಗೆ ತೃಪ್ತಿ ತಂದಿರಲಿಲ್ಲ. 24 ಗಂಟೆಗಳ ಒಳಗಾಗಿ ನಸೀಮ್ ಶಾ ಅವರಿಗೆ ಕೇಂದ್ರೀಯ ಗುತ್ತಿಗೆ ಉಲ್ಲಂಘಿಸಿದ ಮತ್ತು ಮಾಧ್ಯಮ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಆರೋಪದಲ್ಲಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಶಾ ಮೇಲೆ 20 ದಶಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಿದ್ದಲ್ಲದೇ ಅವರ ಜಾಲತಾಣ ಸಲಹೆಗಾರನನ್ನು ವಜಾ ಮಾಡಿ, ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ಪಿಸಿಬಿ ಕಟ್ಟುನಿಟ್ಟಿನ ಜಾಲತಾಣ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.







