ಪಾಕ್ ಸೂಪರ್ ಲೀಗ್ ನಲ್ಲಿ ಆಡಲು ಐಪಿಎಲ್ ತೊರೆದ RCB ಮಾಜಿ ನಾಯಕ ಪಾಫ್ ಡು ಪ್ಲೆಸಿಸ್!

ಫಾಫ್ ಡು ಪ್ಲೆಸಿಸ್ | Photo Credit : PTI
ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಆರ್ಸಿಬಿ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕಾಣಿಸಿಕೊಳ್ಳುವುದಿಲ್ಲ.
14 ವರ್ಷಗಳ ಅವರ ಐಪಿಎಲ್ ನ ನಿರಂತರ ಭಾಗವಹಿಸುವಿಕೆಗೆ ತಾತ್ಕಾಲಿಕ ತೆರೆಬಿದ್ದಿದ್ದು, 2026ರ ಹರಾಜಿಗೆ ತಮ್ಮ ಹೆಸರನ್ನು ಸಲ್ಲಿಸದೇ ಇರುವ ನಿರ್ಧಾರವನ್ನು ಶನಿವಾರ ಅವರು ಘೋಷಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಲ್ಲಿ ಆಡಲು ಸಿದ್ಧವಾಗಿರುವುದಾಗಿ ತಿಳಿಸಿದ್ದಾರೆ.
2012ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಪ್ರವೇಶಿಸಿದ ಡು ಪ್ಲೆಸಿಸ್ ಮೊದಲ ಋತುವಿನಲ್ಲಿ 398 ರನ್ ಗಳಿಸಿ ಗಮನ ಸೆಳೆದಿದ್ದರು. 2018 ಮತ್ತು 2021ರಲ್ಲಿ ಸಿಎಸ್ಕೆ ಪರ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಅವರು ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು. 2025ರ ಹರಾಜಿನ ಮೊದಲು ದಿಲ್ಲಿ ಕ್ಯಾಪಿಟಲ್ಸ್ ತಂಡವು ಅವರನ್ನು ಖರೀದಿಸಿದ್ದರೂ, ಕಳೆದ ಸೀಸನ್ ನಲ್ಲಿ 9 ಪಂದ್ಯಗಳಲ್ಲಿ ಕೇವಲ 202 ರನ್ ಗಳಷ್ಟೇ ಅವರ ಖಾತೆಗೆ ಸೇರಿದ್ದವು.
“ಐಪಿಎಲ್ ನಲ್ಲಿ 14 ಸೀಸನ್ ಗಳ ಬಳಿಕ ಈ ಬಾರಿ ಹರಾಜಿನಲ್ಲಿ ಹೆಸರನ್ನು ಹಾಕದೇ ಇರಲು ನಿರ್ಧರಿಸಿದ್ದೇನೆ. ಇದು ಸುಲಭದ ನಿರ್ಧಾರವಲ್ಲ. ಈ ಲೀಗ್ ನನ್ನ ಕ್ರಿಕೆಟ್ ಜೀವನದ ಅವಿಭಾಜ್ಯ ಭಾಗ. ವಿಶ್ವದರ್ಜೆಯ ಆಟಗಾರರ ಜೊತೆಯಲ್ಲಿ ಅದ್ಭುತ ಅಭಿಮಾನಿಗಳ ಮುಂದೆ ಆಡಲು ಅವಕಾಶ ಸಿಕ್ಕಿದೆ. ಭಾರತ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಇದು ವಿದಾಯವಲ್ಲ, ಮತ್ತೆ ಮರಳುತ್ತೇನೆ,” ಎಂದು ಎಕ್ಸ್ನಲ್ಲಿ ಡು ಪ್ಲೆಸಿಸ್ ಪೋಸ್ಟ್ ಮಾಡಿದ್ದಾರೆ.
41 ವರ್ಷದ ಡು ಪ್ಲೆಸಿಸ್ ಈಗ ಪಿಎಸ್ಎಲ್ ಗೆ ಹೋಗಲು ಸಿದ್ಧರಾಗಿದ್ದಾರೆ. ಮಾರ್ಚ್ ನಿಂದ ಮೇ 2026ರ ವರೆಗೆ ಐಪಿಎಲ್ ಮತ್ತು ಪಿಎಸ್ಎಲ್ ಏಕಕಾಲದಲ್ಲಿ ನಡೆಯಲಿರುವ ಸಂದರ್ಭದಲ್ಲಿ, ಈ ಬಾರಿ ಪಿಎಸ್ಎಲ್ ಆಯ್ಕೆ ಮಾಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
“ಈ ವರ್ಷ ನಾನು ಹೊಸ ಸವಾಲನ್ನು ಆರಿಸಿಕೊಂಡಿದ್ದೇನೆ. ಪಿಎಸ್ಎಲ್ನ ಮುಂಬರುವ ಋತುವಿನಲ್ಲಿ ಆಡಲಿದ್ದೇನೆ. ಶಕ್ತಿ ಮತ್ತು ಪ್ರತಿಭೆಯಿಂದ ತುಂಬಿರುವ ಈ ಲೀಗ್ ನನ್ನ ಆಟಕ್ಕೆ ಹೊಸ ಅನುಭವ ಮತ್ತು ಬೆಳವಣಿಗೆ ನೀಡಲಿದೆ,” ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಡು ಪ್ಲೆಸಿಸ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ್ ಝಲ್ಮಿ ಪರ ಎರಡು ಋತುಗಳಲ್ಲಿ ಆರು ಪಂದ್ಯಗಳನ್ನು ಆಡಿದ್ದರು.
ಫಾಫ್ ಡು ಪ್ಲೆಸಿಸ್ 154 ಐಪಿಎಲ್ ಪಂದ್ಯಗಳಲ್ಲಿ 4,773 ರನ್ ಗಳಿಸಿದ್ದು, 35.09 ಸರಾಸರಿ ಅವರ ಐಪಿಎಲ್ ದಾಖಲೆ.







