ನಾಲ್ಕನೇ ಕ್ವಾರ್ಟರ್ ಫೈನಲ್ : ಸ್ವಿಟ್ಸರ್ಲ್ಯಾಂಡ್ಗೆ ಅರ್ಜೆಂಟೀನದ ಸವಾಲು

Photo Credit : aljazeera.com
ಕಾನ್ಸಾಸ್ ಸಿಟಿ, ಜು.10: ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಚಿತ್ತ ಹರಿಸಿರುವ ಅರ್ಜೆಂಟೀನ ತಂಡವು ರವಿವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಟ್ಸರ್ಲ್ಯಾಂಡ್ ತಂಡವನ್ನು ಎದುರಿಸಲಿದೆ.
ಕೇಪ್ವರ್ಡ್ ತಂಡದ ವಿರುದ್ದ ಗ್ರೂಪ್ ಹಂತದಲ್ಲಿ ಹೆಚ್ಚುವರಿ ಸಮಯದಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದ ಅರ್ಜೆಂಟೀನ ತಂಡವು ಈಜಿಪ್ಟ್ ವಿರುದ್ಧ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ 0-2ರಿಂದ ಚೇತರಿಸಿಕೊಂಡು 3-2 ಅಂತರದಿಂದ ರೋಚಕ ಜಯ ಸಾಧಿಸಿತ್ತು.
ಸ್ವಿಟ್ಸರ್ಲ್ಯಾಂಡ್ ತಂಡವು ಎಲ್ಲ ಪಂದ್ಯಾವಳಿಗಳಲ್ಲಿ ಅರ್ಜೆಂಟೀನ ವಿರುದ್ಧ ಆಡಿರುವ ಏಳು ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಜಯಿಸಿಲ್ಲ. ಅರ್ಜೆಂಟೀನ ತಂಡವು 11 ವಿಶ್ವಕಪ್ ಪಂದ್ಯಗಳನ್ನು ಜಯಿಸಿದ್ದು, ಅಜೇಯ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
39ರ ವಯಸ್ಸಿನ ಮೆಸ್ಸಿ ಅವರು ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಸತತ ಆರು ಗೋಲುಗಳನ್ನು ಗಳಿಸಿದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದರು. ಈ ದಾಖಲೆಯನ್ನು ಮುಂದುವರಿಸುವ ಇರಾದೆಯಲ್ಲಿದ್ದಾರೆ.
ಮೆಸ್ಸಿ, ಮಾರ್ಟಿನೆಝ್ ಹಾಗೂ ಜೂಲಿಯನ್ ಅಲ್ವರೆಝ್ ಪ್ರಮುಖ ಆಟಗಾರರಾಗಿದ್ದು, 2018ರಲ್ಲಿ ಗ್ರೂಪ್ ಹಂತದಲ್ಲಿ ಕ್ರೊಯೇಷಿಯಾ ವಿರುದ್ಧ ಸೋತ ನಂತರ ಹಿಂದಿನ 14 ವಿಶ್ವಕಪ್ ಪಂದ್ಯಗಳಲ್ಲಿ ಅರ್ಜೆಂಟೀನ ತಂಡ ಗೋಲು ಗಳಿಸಿದೆ.
ಹಿಂದಿನ 11 ಪಂದ್ಯಗಳಲ್ಲಿ ಅರ್ಜೆಂಟೀನ ತಂಡವು ಕನಿಷ್ಠ ಎರಡು ಗೋಲು ಗಳಿಸಿದೆ.
ಅರ್ಜೆಂಟೀನ ತಂಡವು 2022ರ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯ ವಿರುದ್ದ 1-2 ಅಂತರದಿಂದ ಆಘಾತಕಾರಿ ಸೋಲುಂಡ ನಂತರ ಹಿಂದಿನ 11 ಪಂದ್ಯಗಳಲ್ಲಿ ಅಜೇಯ ದಾಖಲೆ(9ರಲ್ಲಿ ಜಯ, 2ರಲ್ಲಿ ಡ್ರಾ)ಕಾಯ್ದುಕೊಂಡಿದೆ.
ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದ 120 ನಿಮಿಷಗಳ ಆಟ ಗೋಲುರಹಿತವಾಗಿ ಕೊನೆಗೊಂಡ ನಂತರ ಕೊಲಂಬಿಯಾ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ 4-3 ಗೋಲುಗಳ ಅಂತರದಿಂದ ಮಣಿಸಿದ್ದ ಸ್ವಿಟ್ಸರ್ಲ್ಯಾಂಡ್ 72 ವರ್ಷಗಳ ನಂತರ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿ ಇತಿಹಾಸ ನಿರ್ಮಿಸಿದೆ.
ಅರ್ಜೆಂಟೀನ-ಸ್ವಿಟ್ಸರ್ಲ್ಯಾಂಡ್ ಹೆಡ್-ಟು-ಹೆಡ್
ಸ್ವಿಟ್ಸರ್ಲ್ಯಾಂಡ್ ತಂಡವು ಎಲ್ಲ ಪಂದ್ಯಾವಳಿಗಳಲ್ಲಿ ಅರ್ಜೆಂಟೀನ ತಂಡದ ವಿರುದ್ಧ ಏಳು ಪಂದ್ಯಗಳನ್ನಾಡಿದೆ. ಆದರೆ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು, ಉಳಿದ ಐದು ಪಂದ್ಯಗಳನ್ನು ಸೋತಿದೆ.
ಅರ್ಜೆಂಟೀನ ತಂಡವು ಸ್ವಿಟ್ಸರ್ಲ್ಯಾಂಡ್ ವಿರುದ್ಧ ಈ ತನಕ ಆಡಿರುವ ಎರಡೂ ವಿಶ್ವಕಪ್ ಪಂದ್ಯಗಳನ್ನು ಜಯಿಸಿದೆ. 1966ರಲ್ಲಿ 2-0 ಹಾಗೂ 2014ರಲ್ಲಿ 1-0 ಗೋಲುಗಳ ಅಂತರದಿಂದ ಜಯಶಾಲಿಯಾಗಿದೆ. ಉಭಯ ತಂಡಗಳು 2014ರ ವಿಶ್ವಕಪ್ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿವೆ.
ಸ್ವಿಟ್ಸರ್ಲ್ಯಾಂಡ್ ತಂಡವು ಅರ್ಜೆಂಟೀನ ವಿರುದ್ಧ ಮಾತ್ರವಲ್ಲ, ದಕ್ಷಿಣ ಅಮೆರಿಕ ಎದುರಾಳಿಗಳ ವಿರುದ್ಧ ಆಡಿರುವ 10 ವಿಶ್ವಕಪ್ ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಜಯ ಗಳಿಸಿದೆ. ಮೂರರಲ್ಲಿ ಡ್ರಾ ಹಾಗೂ 6ರಲ್ಲಿ ಸೋತಿದೆ. 2014ರಲ್ಲಿ ಈಕ್ವೆಡಾರ್ ವಿರುದ್ಧ 2-1 ಅಂತರದಿಂದ ಏಕೈಕ ಗೆಲುವು ಪಡೆದಿತ್ತು.






