ಅಕ್ಷರ್ ಪಟೇಲ್ ಆಲ್ ರೌಂಡ್ ಆಟ | 4ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಭರ್ಜರಿ ಜಯ

PC | X@BCCI
ಗೋಲ್ಡ್ಕೋಸ್ಟ್, ನ.6: ಅಕ್ಷರ್ ಪಟೇಲ್ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾವು ಆತಿಥೇಯ ಆಸ್ಟ್ರೇಲಿಯ ತಂಡದ ವಿರುದ್ಧ ಗುರುವಾರ ನಡೆದ ನಾಲ್ಕನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 48 ರನ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ಕ್ರಿಕೆಟ್ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 167 ರನ್ ಗಳಿಸಿದ್ದು, ಆರಂಭಿಕ ಆಟಗಾರ ಶುಭಮನ್ ಗಿಲ್(46 ರನ್, 39 ಎಸೆತ, 4 ಬೌಂಡರಿ, 1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಅಭಿಷೇಕ್ ಶರ್ಮಾ(28 ರನ್, 21 ಎಸೆತ), ಶಿವಂ ದುಬೆ (22 ರನ್, 18 ಎಸೆತ)ಹಾಗೂ ನಾಯಕ ಸೂರ್ಯಕುಮಾರ ಯಾದವ್(20 ರನ್, 10 ಎಸೆತ)ಅಮೂಲ್ಯ ಕೊಡುಗೆ ನೀಡಿದರು.
ಗೆಲ್ಲಲು 168 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡವು 18.2 ಓವರ್ ಗಳಲ್ಲಿ ಕೇವಲ 119 ರನ್ ಗೆ ಆಲೌಟಾಯಿತು. ನಾಯಕ ಮಿಚೆಲ್ ಮಾರ್ಷ್ 24 ಎಸೆತಗಳಲ್ಲಿ 30 ರನ್ ಗಳಿಸಿ ಒಂದಷ್ಟು ಪ್ರತಿರೋಧ ಒಡ್ಡಿದರು. ಉಳಿದವರು ಸ್ಪಿನ್ ಮೋಡಿಗೆ ತತ್ತರಿಸಿದರು.
ಡೆತ್ ಓವರ್ನಲ್ಲಿ 3 ರನ್ ಗೆ 3 ವಿಕೆಟ್ ಗಳನ್ನು ಕಬಳಿಸಿದ ಆಫ್ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಚೆಂಡಿನಲ್ಲಿ ಕೈಚಳಕ ತೋರಿದರು. ಮಧ್ಯಮ ಓವರ್ ಗಳಲ್ಲಿ ಅಕ್ಷರ್ ಪಟೇಲ್(2-20) ಹಾಗೂ ಶಿವಂ ದುಬೆ(2-20) ಆಸ್ಟ್ರೇಲಿಯ ತಂಡವನ್ನು ಕಾಡಿದರು. ವರುಣ್ ಚಕ್ರವರ್ತಿ(1-26)ಹಾಗೂ ಜಸ್ಪ್ರಿತ್ ಬುಮ್ರಾ(1-27)ತಲಾ ಒಂದು ವಿಕೆಟ್ ಗಳನ್ನು ಪಡೆದರು.
ಭರ್ಜರಿ ಗೆಲುವು ದಾಖಲಿಸಿರುವ ಸೂರ್ಯಕುಮಾರ್ ಬಳಗವು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಸರಣಿಯ ಐದನೇ ಹಾಗೂ ಕೊನೆಯ ಟಿ20 ಪಂದ್ಯವು ಬ್ರಿಸ್ಬೇನ್ ನಲ್ಲಿ ಶನಿವಾರ ನಡೆಯಲಿದೆ.
ಭಾರತ ತಂಡವು 14 ಓವರ್ ಗಳ ನಂತರ 2 ವಿಕೆಟ್ ಗಳ ನಷ್ಟಕ್ಕೆ 121 ರನ್ ಗಳಿಸಿದ್ದು, ಆ್ಯಡಮ್ ಝಂಪಾ(3-45) ಹಾಗೂ ನಾಥನ್ ಎಲ್ಲಿಸ್(3-21) ನಿಖರ ಬೌಲಿಂಗ್ ಹೊರತಾಗಿಯೂ ಅಂತಿಮವಾಗಿ 167 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
► ಆಸ್ಟ್ರೇಲಿಯ ತಂಡದ ಕುಸಿತಕ್ಕೆ ಕಾರಣರಾದ ಅಕ್ಷರ್, ಶಿವಂ ದುಬೆ: ಐದು ಓವರ್ನೊಳಗೆ 37 ರನ್ ಗಳಿಸಿದ ಆಸ್ಟ್ರೇಲಿಯ ತಂಡವು ಉತ್ತಮ ಆರಂಭ ಪಡೆದಿತ್ತು. ಆಗ ಮ್ಯಾಥ್ಯೂ ಶಾರ್ಟ್(25 ರನ್, 19 ಎಸೆತ)ವಿಕೆಟನ್ನು ಪಡೆದ ಅಕ್ಷರ್ ಪಟೇಲ್ ಈ ಜೋಡಿಯನ್ನು ಬೇರ್ಪಡಿಸಿದರು.
ಮಿಚೆಲ್ ಮಾರ್ಷ್(30 ರನ್)ಹಾಗೂ ಟಿಮ್ ಡೇವಿಡ್(14 ರನ್, 9 ಎಸೆತ)ವಿಕೆಟ್ ಗಳನ್ನು ಸತತ ಓವರ್ ಗಳಲ್ಲಿ ಉರುಳಿಸಿದ ಶಿವಂ ದುಬೆ ಆಸ್ಟ್ರೇಲಿಯಕ್ಕೆ ಮರ್ಮಾಘಾತ ನೀಡಿದರು. ಈ ಹಂತದಲ್ಲಿ ಆಸ್ಟ್ರೇಲಿಯವು 91 ರನ್ ಗೆ 4 ವಿಕೆಟ್ ಕಳೆದುಕೊಂಡಿತು.
ಭಾರತದ ಬೌಲರ್ ಗಳು ವಾತಾವರಣಕ್ಕೆ ಹೊಂದಿಕೊಂಡರು ಎಂದು ಒಪ್ಪಿಕೊಂಡ ಆಸ್ಟ್ರೇಲಿಯದ ನಾಯಕ ಮಿಚೆಲ್ ಮಾರ್ಷ್ ‘‘ಪಿಚ್ ಬ್ಯಾಟಿಂಗ್ಗೆ ಪೂರಕವಾಗಿರಲಿಲ್ಲ. ನಮಗೆ ಕೆಲವು ಜೊತೆಯಾಟದ ಅಗತ್ಯವಿತ್ತು. ಆದರೆ, ಆ ನಿಟ್ಟಿನಲ್ಲಿ ನಾವು ವಿಫಲರಾದೆವು. ಇಂತಹ ಪರಿಸ್ಥಿತಿಯಲ್ಲಿ ಭಾರತವು ವಿಶ್ವ ದರ್ಜೆಯ ತಂಡವಾಗಿ’’ ಎಂದರು.
ಅಕ್ಷರ್ ಪಟೇಲ್ ತನ್ನ 4 ಓವರ್ ಗಳಲ್ಲಿ ಕೇವಲ 20 ರನ್ ನೀಡಿ, 12 ಡಾಟ್ ಬೌಲ್ ಗಳನ್ನು ಎಸೆದರು. ಶಿವಂ ದುಬೆ ಅವರು ಅಪಾಯಕಾರಿ ಆಟಗಾರ ಟಿಮ್ ಡೇವಿಡ್ ವಿಕೆಟನ್ನು ಉರುಳಿಸಿ ಭಾರತಕ್ಕೆ ಸ್ಪಷ್ಟ ಮೇಲುಗೈ ಒದಗಿಸಿದರು.
ಮಣಿಕಟ್ಟು ಗಾಯದಿಂದ ಚೇತರಿಸಿಕೊಂಡು ವಾಪಸಾಗಿರುವ ಆಲ್ ರೌಂಡರ್ ಮ್ಯಾಕ್ಸ್ವೆಲ್ ಗೆ (2 ರನ್) ವರುಣ್ ಚಕ್ರವರ್ತಿ(1-26) ಪೆವಿಲಿಯನ್ ಹಾದಿ ತೋರಿಸಿದರು. ಆಸೀಸ್ನ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಹೀಗಾಗಿ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಪ್ರವಾಸಿ ತಂಡದ ಸ್ಪಿನ್ನರ್ ಗಳ ಪ್ರಾಬಲ್ಯವು ಮುಂದಿನ ವರ್ಷಾರಂಭದಲ್ಲಿ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗಿಂತ ಮೊದಲು ಆಸ್ಟ್ರೇಲಿಯಕ್ಕೆ ಎದುರಿಸುತ್ತಿರುವ ಎಚ್ಚರಿಕೆಯ ಗಂಟೆಯಾಗಿದೆ.
► ಭಾರತ 167 ರನ್: ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ(28 ರನ್, 21 ಎಸೆತ)ಹಾಗೂ ಶುಭಮನ್ ಗಿಲ್(46 ರನ್, 39 ಎಸೆತ)56 ರನ್ ಜೊತೆಯಾಟ ನಡೆಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ಪಂದ್ಯ ಮುಂದುವರಿದಂತೆ ವಿಕೆಟ್ ಗಳು ಬೀಳಲಾರಂಭಿಸಿದವು.
3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಶಿವಂ ದುಬೆ 18 ಎಸೆತಗಳಲ್ಲಿ 22 ರನ್ ಗಳಿಸಿದರು. ಸೂರ್ಯಕುಮಾರ್ 2 ಸಿಕ್ಸರ್ ಗಳನ್ನು ಸಿಡಿಸಿದರೂ 20 ರನ್ ಗೆ ಔಟಾದರು. ನಾಥನ್ ಎಲ್ಲಿಸ್(3-21)ಭಾರತದ ಅಗ್ರ ಸರದಿಯ ಬ್ಯಾಟರ್ ಗಳಿಗೆ ಸವಾಲಾದರು. ಸ್ಪಿನ್ನರ್ ಝಂಪಾ ಅವರು 45 ರನ್ ನೀಡಿದ್ದರೂ 3 ವಿಕೆಟ್ ಗಳನ್ನು ಉರುಳಿಸಿದರು. ಭಾರತ ತಂಡವು ಕೊನೆಯ 5 ಓವರ್ ಗಳಲ್ಲಿ 42 ರನ್ ಗೆ 4 ವಿಕೆಟ್ ಗಳನ್ನು ಕಳೆದುಕೊಂಡಿತು. ಆದರೆ ಅಕ್ಷರ್ ಪಟೇಲ್(ಔಟಾಗದೆ 21,11 ಎಸೆತ, 1 ಬೌಂಡರಿ, 1 ಸಿಕ್ಸರ್)ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿ ಭಾರತವು ಹೋರಾಟಕಾರಿ ಮೊತ್ತ ಗಳಿಸುವಲ್ಲಿ ನೆರವಾದರು.
► ಕುತೂಹಲ ಕೆರಳಿಸಿದ ಫೈನಲ್ ಪಂದ್ಯ:
ಬ್ರಿಸ್ಬೇನ್ ನಲ್ಲಿ ಶನಿವಾರ ನಡೆಯಲಿರುವ ಕೊನೆಯ ಟಿ20 ಪಂದ್ಯವು ಕುತೂಹಲ ಕೆರಳಿಸಿದ್ದು, ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಭಾರತವು ಆಸ್ಟ್ರೇಲಿಯದ ನೆಲದಲ್ಲಿ ಟಿ20 ಸರಣಿಯಲ್ಲಿ ಅಜೇಯ ದಾಖಲೆಯನ್ನು ಮುಂದುವರಿಸಲಿದೆ. ಸತತ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ ಉಜ್ವಲವಾಗಿದೆ.







