ನಾಳೆ ನಾಲ್ಕನೇ ಟಿ-20 ಪಂದ್ಯ | ಭಾರತಕ್ಕೆ ಗೆಲುವಿನ ಓಟ ಮುಂದುವರಿಸುವ ತವಕ

Photo Credit : PTI
ಆಕ್ಲೆಂಡ್: ಭರ್ಜರಿ ಬ್ಯಾಟಿಂಗ್ನ ಮೂಲಕ ಟಿ-20 ಸರಣಿಯ ಮೊದಲ ಮೂರು ಪಂದ್ಯಗಳನ್ನು ಜಯಿಸಿ ಸಂಪೂರ್ಣ ಮೇಲುಗೈ ಸಾಧಿಸಿರುವ ಟೀಮ್ ಇಂಡಿಯಾ ಆತಿಥೇಯ ನ್ಯೂಝಿಲ್ಯಾಂಡ್ ವಿರುದ್ಧ ತನ್ನ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.
ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡದ ಇನಿಂಗ್ಸ್ ಆರಂಭಿಸಿದ್ದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಪವರ್ಪ್ಲೇನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು.
ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ಭಾರತದ ಬ್ಯಾಟರ್ಗಳು ಇನ್ನಷ್ಟು ದಾಖಲೆಗಳನ್ನು ಮುರಿದು, ನ್ಯೂಝಿಲ್ಯಾಂಡ್ ಬೌಲರ್ಗಳನ್ನು ಬೆಂಡೆತ್ತುವ ಸಾಧ್ಯತೆ ಅಧಿಕವಿದೆ. ಆಕ್ಲಂಡ್ನ ಬೌಂಡರಿ ತೀರಾ ಚಿಕ್ಕದ್ದಾಗಿದೆ.
ಬಹುತೇಕ ಭಾರತೀಯ ಪ್ರೇಕ್ಷಕರು ಸೇರಿದಂತೆ ಸುಮಾರು 40,000 ಕ್ರಿಕೆಟ್ ಅಭಿಮಾನಿಗಳು ಅಭಿಷೇಕ್, ಸೂರ್ಯವಂಶಿ, ಸಂಜು ಸ್ಯಾಮ್ಸನ್ ಹಾಗೂ ಶ್ರೇಯಸ್ ಅಯ್ಯರ್ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದಿದ್ದಾರೆ.
ನ್ಯೂಝಿಲ್ಯಾಂಡ್ನ ಬೌಲಿಂಗ್ ವಿಭಾಗವು ಗಾಯದ ಸಮಸ್ಯೆ ಎದುರಿಸುತ್ತಿದೆ. ಹಿರಿಯ ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಗಾಯದಿಂದ ಸರಣಿಯ ಉಳಿದ ಎರಡು ಪಂದ್ಯದಿಂದ ಹೊರಗುಳಿದಿದ್ದಾರೆ.
ಭಾರತ ತಂಡವು ಮುಂಬರುವ ಏಕದಿನ ಹಾಗೂ ಟಿ-20 ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಕುಲದೀಪ ಯಾದವ್, ವರುಣ್ ಚಕ್ರವರ್ತಿ ಹಾಗೂ ಶಿವಂ ದುಬೆ ಪ್ರಸಕ್ತ ಸರಣಿಯಲ್ಲಿ ಇನ್ನಷ್ಟೇ ಆಡಬೇಕಾಗಿದೆ. ಸಂಭಾವ್ಯ ಬದಲಾವಣೆಗಳ ಹೊರತಾಗಿಯೂ ಭಾರತದ ಬ್ಯಾಟಿಂಗ್ ಈಗಲೂ ಬಲಿಷ್ಠವಾಗಿದೆ.
ಬೆವನ್ ಜೇಕಬ್ಸ್ ಶುಕ್ರವಾರ ತನ್ನ ತವರು ಮೈದಾನದಲ್ಲಿ ಮೊದಲ ಬಾರಿ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.
ಉಭಯ ತಂಡಗಳಲ್ಲಿ ಬದಲಾವಣೆ?
ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ ತಂಡವು ಕುಲದೀಪ್ ಅಥವಾ ವರುಣ್ಗೆ ಅವಕಾಶ ನೀಡಲು ಚಿಂತಿಸುತ್ತಿದೆ. ಏಕದಿನ ಹಾಗೂ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ನಿತೀಶ್ ರೆಡ್ಡಿಗೆ ಟೀಮ್ ಮ್ಯಾನೇಜ್ಮೆಂಟ್ ವಿಶ್ರಾಂತಿ ನೀಡಿದರೆ, ಶಿವಂ ದುಬೆ ಆಡಬಹುದು.
ಸರಣಿಯ ಮೊದಲ ಪಂದ್ಯವನ್ನಾಡಿದ ನಂತರ ಪ್ರಿನ್ಸ್ ಯಾದವ್ಗೆ ದಾರಿ ಬಿಟ್ಟುಕೊಟ್ಟಿರುವ ಮಯಾಂಕ್ ಯಾದವ್ ಮತ್ತೆ ಅವಕಾಶ ಪಡೆಯುವ ಕನಸು ಕಾಣುತ್ತಿದ್ದಾರೆ.
ಫರ್ಗ್ಯುಸನ್ ಅವರು ಮ್ಯಾಟ್ ಹೆನ್ರಿ ಹಾಗೂ ಫೌಲ್ಕ್ಸ್ ಅವರಿದ್ದ ಗಾಯಾಳುಗಳ ಪಟ್ಟಿಗೆ ಸೇರಿದ್ದಾರೆ. ಫರ್ಗ್ಯುಸನ್ ಬದಲಿಗೆ ಇನ್ನೋರ್ವ ವೇಗಿ ಮ್ಯಾಟ್ ಫಿಶರ್ ಆಯ್ಕೆಯಾಗಿದ್ದಾರೆ.
ಪಿಚ್ ಹಾಗೂ ವಾತಾವರಣ
ಈಡನ್ ಪಾರ್ಕ್ನಲ್ಲಿ ಪಿಚ್ ಮಧ್ಯಭಾಗದಿಂದ ನೇರ ದಿಕ್ಕಿನ ಬೌಂಡರಿಗಳು ತುಂಬಾ ಚಿಕ್ಕದ್ದಾಗಿವೆ. ಇದು ಐಸಿಸಿ ನಿಗದಿಪಡಿಸಿದ ಮಾನದಂಡಗಳನ್ನು(ಪಿಚ್ನ ಮಧ್ಯಭಾಗದಿಂದ ಕನಿಷ್ಠ 59.43 ಮೀ.)ಪೂರೈಸುವುದಿಲ್ಲ. ಆದರೆ ಈ ನಿಯಮಗಳು ಜಾರಿಗೆ ಬರುವ ಮೊದಲೇ ಅಸ್ತಿತ್ವದಲ್ಲಿರುವ ಕ್ರೀಡಾಂಗಣವಾಗಿರುವುದರಿಂದ ಇದಕ್ಕೆ ವಿನಾಯಿತಿ ನೀಡಲಾಗಿದೆ. ಹೀಗಾಗಿ ಈ ಮೈದಾನದಲ್ಲಿ ಮತ್ತೊಂದು ಭರ್ಜರಿ ರನ್ ಮಳೆ ಅಥವಾ ಬೃಹತ್ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಪಂದ್ಯ ನಡೆಯುವ ಸಮಯದಲ್ಲಿ ಹವಾಮಾನವು ಉತ್ತಮವಾಗಿರುವ ಸಾಧ್ಯತೆಯಿದೆ.
ಅಂಕಿ-ಅಂಶ
ಅರ್ಷದೀಪ್ ಸಿಂಗ್ಗೆ ಟಿ-20 ಕ್ರಿಕೆಟ್ನಲ್ಲಿ 150 ವಿಕೆಟ್ ಪೂರೈಸಲು ಒಂದು ವಿಕೆಟ್ ಅಗತ್ಯವಿದೆ. ಅರ್ಷದೀಪ್ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಮಿಚೆಲ್ ಸ್ಯಾಂಟ್ನರ್ಗೂ 150 ಟಿ-20 ವಿಕೆಟ್ ಪಡೆಯಲು ಇನ್ನೊಂದು ವಿಕೆಟ್ ಬೇಕಾಗಿದೆ. ಸೋಧಿ, ಟಿಮ್ ಸೌಥಿ ನಂತರ ಈ ಸಾಧನೆಗೈದ ಕಿವೀಸ್ನ ಮೂರನೇ ಆಟಗಾರನಾಗಲಿದ್ದಾರೆ.
ಭಾರತ ಈ ವರ್ಷ ಟಿ-20 ಕ್ರಿಕೆಟಿನ 38 ಇನಿಂಗ್ಸ್ಗಳಲ್ಲಿ 10.45 ರನ್ರೇಟ್ನಲ್ಲಿ ಆಡಿದೆ. ಇದು ಪೂರ್ಣ ಸದಸ್ಯ ರಾಷ್ಟ್ರಗಳ ತಂಡದಲ್ಲಿ ಅತ್ಯಧಿಕವಾಗಿದೆ.
ತಂಡಗಳು
ಭಾರತ(ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ವೈಭವ್ ಸೂರ್ಯವಂಶಿ, 3.ಸಂಜು ಸ್ಯಾಮ್ಸನ್(ವಿಕೆಟ್ಕೀಪರ್), 4. ಶ್ರೇಯಸ್ ಅಯ್ಯರ್(ನಾಯಕ), 5. ತಿಲಕ್ ವರ್ಮಾ, 6. ನಮನ್ ಧೀರ್, 7. ನಿತೀಶ್ ರೆಡ್ಡಿ/ಶಿವಂ ದುಬೆ, 8. ಅಕ್ಷರ್ ಪಟೇಲ್/ಕುಲದೀಪ ಯಾದವ್/ವರುಣ್ ಚಕ್ರವರ್ತಿ, 9. ಭುವನೇಶ್ವರ ಕುಮಾರ್, 10. ಪ್ರಿನ್ಸ್ ಯಾದವ್, 11. ಅರ್ಷದೀಪ ಸಿಂಗ್/ಮಯಾಂಕ್ ಯಾದವ್.
ನ್ಯೂಝಿಲ್ಯಾಂಡ್(ಸಂಭಾವ್ಯ): 1. ಫಿನ್ ಅಲೆನ್, 2. ಟಿಮ್ ಸೀಫರ್ಟ್(ವಿಕೆಟ್ಕೀಪರ್), 3. ಡ್ಯಾರಿಲ್ ಮಿಚೆಲ್, 4. ಗ್ಲೆನ್ ಫಿಲಿಪ್ಸ್, 5. ಬೆವನ್ ಜೇಕಬ್ಸ್, 6. ಮೈಕಲ್ ಬ್ರೆಸ್ವೆಲ್, 7. ಮಿಚೆಲ್ ಸ್ನಾಂಟ್ನರ್(ನಾಯಕ), 8. ಆ್ಯಡಮ್ ಮಿಲ್ನೆ, 9. ಜೇಕಬ್ ಡಫಿ, 10. ಮ್ಯಾಟ್ ಫಿಶರ್, 11.ಬ್ಲೈರ್ ಟಿಕ್ನೆರ್/ನಾಥನ್ ಸ್ಮಿತ್.






