ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್: ಈ ಸ್ಟಾರ್ ಸ್ಪಿನ್ನರ್ ಗೆ ಸಿಗುತ್ತಾ ಅವಕಾಶ?

ಕುಲದೀಪ್ ಯಾದವ್ PC: x.com/TimesNow
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಕೇವಲ 193 ರನ್ ಗಳ ಗುರಿ ತಲುಪಲು ವಿಫಲವಾಗಿ 22 ರನ್ ಗಳ ಸೋಲು ಒಪ್ಪಿಕೊಂಡ ಭಾರತ, ಆ್ಯಂಡರ್ಸನ್- ತೆಂಡೂಲ್ಕರ್ ಟ್ರೋಫಿ ಗೆಲ್ಲುವ ಕನಸು ಜೀವಂತವಾಗಿ ಇರಿಸಿಕೊಳ್ಳಬೇಕಾದರೆ ಈ ತಿಂಗಳ 23ರಿಂದ ಆರಂಭವಾಗುವ ಮ್ಯಾಂಚೆಸ್ಟರ್ ಟೆಸ್ಟ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹಲವು ಮಂದಿ ಉತ್ತಮ ಬ್ಯಾಟ್ಸ್ ಮನ್ ಗಳು ಹಾಗೂ ಕೆಳಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಅವರಂಥ ಆಲ್ ರೌಂಡರ್ ಗಳಿದ್ದರೂ ಭಾರತ ಅಚ್ಚರಿಯ ಸೋಲು ಕಂಡಿದೆ. ಇದೀಗ ನಾಲ್ಕನೇ ಟೆಸ್ಟ್ ನಲ್ಲಿ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಆಡುವ 11 ಬಳಗದಲ್ಲಿ ಸೇರಿಸಿಕೊಳ್ಳುವಂತೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲರ್ಕ್ ಸಲಹೆ ಮಾಡಿದ್ದಾರೆ. ಯಾದವ್ ಸರಣಿಯಲ್ಲಿ ಇದುವರೆಗೆ ಯಾವುದೇ ಪಂದ್ಯ ಆಡಿಲ್ಲ.
"ಭಾರತ ಇನ್ನೂ ಹೆಮ್ಮೆಯಿಂದ ಬೀಗಬಹುದು; ನಿರ್ದಿಷ್ಟವಾಗಿ ಜಡೇಜಾ; ನಾನಿದನ್ನು ಬಹಿರಂಗವಾಗಿ ಹೇಳಿದ್ದೆ. ಇಷ್ಟಾಗಿಯೂ ಕುಲದೀಪ್ ಯಾದವ್ ಆಡುವ 11ರಲ್ಲಿ ಇರುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಆತನನ್ನು ಒಳಗೆ ತರಬೇಕು. ಆದರೆ ಹೇಗೆ ಎನ್ನುವುದು ನನಗೆ ತಿಳಿಯದು. ವಾಷಿಂಗ್ಟನ್ ಸುಂದರ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ರನ್ ಕೂಡಾ ಗಳಿಸಿದ್ದಾರೆ. ಜಡೇಜಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಲವು ಬಾರಿ ಅವರು ಭಾರತವನ್ನು ರಕ್ಷಿಸಿದ್ದಾರೆ. ಭಾರತ ಅವರಿಂದಾಗಿ ಹಲವು ಬಾರಿ ಗೆದ್ದಿದೆ" ಎಂದು ಬಿಯಾಂಡ್23ಪಾಡ್ ಕಾಸ್ಟ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸರಣಿಯಲ್ಲಿ ಭಾರತ 1-2 ಹಿನ್ನೆಡೆಯಲ್ಲಿದ್ದು, ಜಸ್ಪ್ರೀತ್ ಬೂಮ್ರಾ ಅವರ ಲಭ್ಯತೆ ಪ್ರಶ್ನಾರ್ಥಕವಾಗಿಯೇ ಉಳಿದಿದೆ.







