2027ರ ಐಪಿಎಲ್ ದೃಷ್ಟಿಯಿಂದ ಬದಲಿ ಆಟಗಾರರನ್ನು ಆಯ್ಕೆ ಮಾಡಿದ ಫ್ರಾಂಚೈಸಿಗಳು

ಸಾಂದರ್ಭಿಕ ಚಿತ್ರ
ಮುಂಬೈ, ಮೇ 25: ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್)ಲೀಗ್ ಹಂತದ ಅಂತಿಮ ಸುತ್ತಿನಲ್ಲಿ ಮೂರು ಫ್ರಾಂಚೈಸಿಗಳು ಗಾಯಾಳು ಆಟಗಾರರ ಬದಲಿಗೆ ನಾಲ್ವರು ಆಟಗಾರರನ್ನು ಸೇರಿಸಿಕೊಂಡಿದೆ.
ಈ ನಾಲ್ವರು ಆಟಗಾರರು ಆಯಾ ತಂಡಗಳ ಕೊನೆಯ ಲೀಗ್ ಪಂದ್ಯಗಳಲ್ಲಿ ಆಡಿರಲಿಲ್ಲ. 2027ರ ಐಪಿಎಲ್ ಟೂರ್ನಿಗಿಂತ ಮೊದಲು ರಿಕೆನ್ಶನ್ಆಯ್ಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೆಜ್ಜೆ ಇಡಲಾಗಿದೆ.
ಕ್ವಿಂಟನ್ ಡಿಕಾಕ್ ಹಾಗೂ ರಾಜ್ ಬಾವಾ ಬದಲಿಗೆ ಮಹಿಪಾಲ್ ಲಾಮ್ರೊರ್ ಹಾಗೂ ರುಚಿತ್ ಅಹಿರ್ರನ್ನು ಆಯ್ಕೆ ಮಾಡಲಾಗಿದೆ ಎಂದು ಶನಿವಾರದಂದು ಮುಂಬೈ ಇಂಡಿಯನ್ಸ್ ಪ್ರಕಟಿಸಿತ್ತು. ರಾಜಸ್ಥಾನ ರಾಯಲ್ಸ್ ತಂಡವು ರವಿ ಸಿಂಗ್ ಬದಲಿಗೆ ಎಮನ್ಜೋತ್ ಚಹಾಲ್ರನ್ನು ಆಯ್ಕೆ ಮಾಡಿತ್ತು.
ಮಥೀಶ ಪಥಿರನ ಬದಲಿಗೆ ಲವ್ನಿತ್ ಸಿಸೋಡಿಯಾರೊಂದಿಗೆ ಸಹಿ ಹಾಕಲಾಗಿದೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡವು ರವಿವಾರ ದೃಢಪಡಿಸಿದೆ.
ಐಪಿಎಲ್ನ ಗಾಯಾಳು ಆಟಗಾರರಿಗೆ ಸಂಬಂಧಿಸಿದ ನಿಯಮಗಳ ಪ್ರಕಾರ, ಆಟಗಾರರು 12ನೇ ಪಂದ್ಯಕ್ಕಿಂತ ಮೊದಲು ಗಾಯಗೊಂಡರೆ, ಗಾಯಗೊಂಡ ಆಟಗಾರರು ಹಾಗೂ ಅವರ ಬದಲಿಗೆ ಆಯ್ಕೆಯಾದ ಆಟಗಾರನು ಮುಂಬರುವ ಐಪಿಎಲ್ಗಿಂತ ಮೊದಲು ರಿಕೆನ್ಶನ್ಗೆ ಅರ್ಹರಿದ್ದಾರೆ.
12ನೇ ಲೀಗ್ ಪಂದ್ಯ ಮುಗಿದ ನಂತರ ಈ ಎಲ್ಲ ಪ್ರಕಟನೆಯನ್ನು ಹೊರಡಿಸಲಾಗಿದೆ. ಪ್ರತೀ ಫ್ರಾಂಚೈಸಿಯ 12ನೇ ಪಂದ್ಯಕ್ಕಿಂತ ಮೊದಲು ಲೀಗ್ ಅಧಿಕಾರಿಗಳಿಗೆ ಎಲ್ಲ ಗಾಯಾಳುಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಐಪಿಎಲ್ ಅಧಿಕಾರಿಗಳು ‘ಸ್ಪೋರ್ಟ್ಸ್ಟಾರ್’ಗೆ ಖಚಿತಪಡಿಸಿದ್ದಾರೆ. ಹೀಗಾಗಿ ನಾಲ್ವರು ಬದಲಿ ಆಟಗಾರರು ಐಪಿಎಲ್ 2027ಕ್ಕೆ ರಿಟೆನ್ಶನ್ಗೆ ಅರ್ಹರಿದ್ದಾರೆ.






