ಫ್ರೀಸ್ಟೈಲ್ ಚೆಸ್: ಗುಕೇಶ್ ಗೆ ದಕ್ಕದ ಜಯ; ಮೊದಲ ದಿನವೇ ಕಾರ್ಲ್ ಸನ್ ಗೆ ಮೂರು ಸೋಲು!

ಗುಕೇಶ್ PC: x.com/chesscom_in
ಹೊಸದಿಲ್ಲಿ: ಜರ್ಮನಿಯ ಬ್ಲಾಟಿಕ್ ಕರಾವಳಿಯ ವೀಸ್ಸೆನ್ ಹಾಸ್ ನಲ್ಲಿ ಶುಕ್ರವಾರ 2025ನೇ ಸಾಲಿನ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್ ಸ್ಲಾಂ ಗೆ ಚಾಲನೆ ದೊರಕಿದೆ. ವಿಶ್ವದ ಅಗ್ರಗಣ್ಯ ಗ್ರ್ಯಾಂಡ್ ಮಾಸ್ಟರ್ ಗಳು ಪಾಲ್ಗೊಂಡಿರುವ ಈ ನಾಕೌಟ್ ಟೂರ್ನಿ, ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವ ಎಂಟು ಆಟಗಾರರನ್ನು ಆಯ್ಕೆ ಮಾಡಲಿದೆ.
ವಿಶ್ವದ ಅತ್ಯಂತ ಕಿರಿಯ ಚಾಂಪಿಯನ್ ಎನಿಸಿಕೊಂಡಿರುವ ಭಾರತದ ಡಿ.ಗುಕೇಶ್ ಪಾಲಿಗೆ ಆರಂಭದ ದಿನ ಸವಾಲುದಾಯಕವಾಗಿತ್ತು. 18 ವರ್ಷದ ಆಟಗಾರ ಆರಂಭಿಕ ಪಂದ್ಯದಲ್ಲಿ ನೊದಿರ್ಬೆಕ್ ಅಬ್ದುಸತ್ತರೋವ್ ವಿರುದ್ಧ ಡ್ರಾ ಸಾಧಿಸಿದರೆ, ಅಲಿರೆಝಾ ಫಿರೌಝಾ ಜತೆ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಮತ್ತೊಬ್ಬ ಮುತ್ಸದ್ಧಿ ಲೆವೋನ್ ಅರೋನಿಯನ್ ವಿರುದ್ಧ ಭರವಸೆಯ ಆರಂಭ ಕಂಡುಬಂದರೂ ಕೊನೆಗೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮತ್ತೊಬ್ಬ ಭರವಸೆಯ ಆಟಗಾರ ಜವೋಖಿರ್ ಸಿಂದರೋವ್ ವಿರುದ್ಧ ಸೋಲಿನಿಂದ ಪಾರಾದ ಗುಕೇಶ್ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ, ಹಿರು ನಕಮುರಾ ವಿರುದ್ಧವೂ ಅದೇ ಫಲಿತಾಂಶಕ್ಕೆ ತೃಪ್ತಿಪಟ್ಟರು. ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಗುಕೇಶ್ ಮೊದಲ ದಿನ ಯಾವುದೇ ಗೆಲುವು ಕಾಣಲಿಲ್ಲ.
ವಿಶ್ವನಾಥನ್ ಆನಂದ್ ಬದಲು ಟೂರ್ನಿಯಲ್ಲಿ ಅವಕಾಶ ಪಡೆದ ಸಿಂದರೋವ್ ದಿನದ ಅತ್ಯುತ್ತಮ ಪ್ರದರ್ಶನ ತೋರಿದರು. ಐದು ಸುತ್ತಿನಲ್ಲಿ 4.5 ಅಂಕ ಕಲೆ ಹಾಕಿದ್ದಾರೆ. ಅವರು ಮ್ಯಾಗ್ನೋಸ್ ಕಾರ್ಲ್ ಸನ್ ವಿರುದ್ಧ ಚೊಚ್ಚಲ ಜಯ ಸಾಧಿಸಿದರು. ಸಿಂದರೋವ್ 5ಕ್ಕೆ 5 ಅಂಕ ಗಳಿಸುವ ಭರವಸೆ ಮೂಡಿಸಿದರೂ, ಗುಕೇಶ್ ವಿರುದ್ಧದ ಪಂದ್ಯ ಡ್ರಾ ಆಗಿದ್ದರಿಂದ 4.5 ಅಂಕಗಳಿಗೆ ತೃಪ್ತಿಪಟ್ಟರು.
ಮತ್ತೊಬ್ಬ ಸ್ಟಾರ್ ಆಟಗಾರ ಫ್ಯಾಬಿಯಾನೊ ಕರೂನಾ ಕೂಡಾ 4.5 ಅಂಕ ಕಲೆ ಹಾಕಿದ್ದಾರೆ. ಅಲಿರೆಝಾ ಫಿರೌಝಾ 3.5 ಹಾಗೂ ನೊದಿರ್ಬೆಕ್ 2.5 ಅಂಕಗಳನ್ನು ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ. ತಲಾ 2 ಅಂಕಗಳನ್ನು ಗಳಿಸಿರುವ ಮ್ಯಾಗ್ನಸ್ ಕಾರ್ಲ್ ಸನ್, ಡಿ.ಗುಕೇಶ್, ಹಿಕರು ನಕಮುರಾ ಮತ್ತು ವಿನ್ಸೆಂಟ್ ಕೇಮರ್ ಕ್ರಮವಾಗಿ ಐದರಿಂದ ಎಂಟನೇ ಸ್ಥಾನದಲ್ಲಿದ್ದಾರೆ.
ವಿಶ್ವನಾಥ್ ಆನಂದ್ ಬದಲು ಟೂರ್ನಿಯಲ್ಲಿ ಸ್ಥಾನ ಪಡೆದ ಉಜ್ಬೆಕಿಸ್ತಾನದ ಗ್ರ್ಯಾಂಡ್ ಮಾಸ್ಟರ್ ಎಲ್ಲ ನಿರೀಕ್ಷೆಗಳನ್ನೂ ಮೀರಿ ಮೊದಲ ದಿನವೇ ಫ್ಯಾಬಿಯಾನೊ ಕರೂನಾ ಜತೆ ನಾಕೌಟ್ ಹಂತವನ್ನು ಖಾತರಿಪಡಿಸಿಕೊಂಡರು.
ಫಾರ್ಮುಲಾ 1 ಶೈಲಿಯ ಅಂಕ ಪದ್ಧತಿಯನ್ನು ಹೊಂದಿರುವ ಟೂರ್ನಿಯ ವಿಜೇತರನ್ನು 2025ರ ಕೊನೆಗೆ ಆಫ್ರಿಕಾದಲ್ಲಿ ನಡೆಯುವ ಟೂರ್ನಿ ನಿರ್ಧರಿಸಲಿದೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28







