ಫ್ರೆಂಚ್ ಓಪನ್ 2025 | ಜೊಕೊವಿಕ್, ಗೌಫ್, ಮ್ಯಾಡಿಸನ್ ಕೊನೆ 16ರ ಸುತ್ತಿಗೆ
ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಶನಿವಾರ ರಾತ್ರಿ ಸರ್ಬಿಯದ ನೊವಾಕ್ ಜೊಕೊವಿಕ್, ಅಮೆರಿಕದ ಕೋಕೊ ಗೌಫ್ ಮತ್ತು ಅಮೆರಿಕದವರೇ ಆದ ಮ್ಯಾಡಿಸನ್ ಕೀಸ್ ಪ್ರಿಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲಿ, ನೊವಾಕ್ ಜೊಕೊವಿಕ್ ಮೂರನೇ ಸುತ್ತಿನಲ್ಲಿ, ಆಸ್ಟ್ರಿಯದ ಫಿಲಿಪ್ ಮಿಸೊಲಿಕ್ರನ್ನು 6-3, 6-4, 6-2 ಸೆಟ್ಗಳಿಂದ ಸೋಲಿಸಿದರು. ಇದು ಫ್ರೆಂಚ್ ಓಪನ್ನಲ್ಲಿ ಜೊಕೊವಿಕ್ ಗೆದ್ದ 99ನೇ ಪಂದ್ಯವಾಗಿದೆ.
ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಮೂರು ಬಾರಿಯ ಚಾಂಪಿಯನ್ 38 ವರ್ಷದ ಜೊಕೊವಿಕ್ಗೆ ಅವರ 23 ವರ್ಷದ ಎದುರಾಳಿ ಹಲವು ಸಂದರ್ಭಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಆದರೆ, ಜೊಕೊವಿಕ್ ತನ್ನ ಎದುರಾಳಿಗಿಂತ ಹೆಚ್ಚಿನ ಶಕ್ತಿಯನ್ನು ಪ್ರದರ್ಶಿಸಿದರು ಹಾಗೂ ಎಲ್ಲಾ ಹಂತಗಳಲ್ಲೂ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದಂತೆ ಕಂಡುಬಂದರು.
ಅವರು ಫ್ರೆಂಚ್ ಓಪನ್ನಲ್ಲಿ ಈವರೆಗಿನ ಮೂರು ಸುತ್ತಿನ ಪಂದ್ಯಗಳಲ್ಲಿ ಒಂದು ಸೆಟ್ಟನ್ನೂ ಕಳೆದುಕೊಂಡಿಲ್ಲ.
ಕೋಕೊ ಗೌಫ್ಗೆ ಜಯ
ಎರಡನೇ ವಿಶ್ವ ರ್ಯಾಂಕಿಂಗ್ನ ಅಮೆರಿಕದ ಕೋಕೊ ಗೌಫ್ ಶನಿವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಝೆಕ್ನ ಮೇರೀ ಬೋರ್ಕೆವರನ್ನು 6-1, 7-6(3) ಸೆಟ್ಗಳಿಂದ ಸೋಲಿಸಿ ಪ್ರಿಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಕಳೆದ ವರ್ಷ ಪ್ಯಾರಿಸ್ನಲ್ಲಿ ಸೆಮಿಫೈನಲ್ ತಲುಪಿದ್ದ ಗೌಫ್, 47ನೇ ವಿಶ್ವ ರ್ಯಾಂಕಿಂಗ್ನ ಮೇರೀ ಬೋರ್ಕೊ ವಿರುದ್ಧದ ತನ್ನ ಹಿಂದಿನ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದ್ದರು. ಆದರೆ, ಶನಿವಾರ 21 ವರ್ಷದ ಗೌಫ್ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಆರಂಭಿಕ ಸೆಟ್ನಲ್ಲಿ ತನ್ನ ಎದುರಾಳಿಗೆ ಯಾವುದೇ ಅವಕಾಶವನ್ನು ಬಿಟ್ಟುಕೊಡಲಿಲ್ಲ.
ಪ್ರಿಕ್ವಾರ್ಟರ್ಫೈನಲ್ನಲ್ಲಿ ಗೌಫ್ ರಶ್ಯದ 20ನೇ ವಿಶ್ವ ರ್ಯಾಂಕಿಂಗ್ನ ಎಕಟರೀನಾ ಅಲೆಕ್ಸಾಂಡ್ರೋವರನ್ನು ಎದುರಿಸಲಿದ್ದಾರೆ.
ಸೋಫಿಯಾಗೆ ಸೋಲುಣಿಸಿದ ಮ್ಯಾಡಿಸನ್ ಕೀಸ್
ಶನಿವಾರ ರಾತ್ರಿ ನಡೆದ ಇನ್ನೊಂದು ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ, ಅಮೆರಿಕದ ಮ್ಯಾಡಿಸನ್ ಕೀಸ್ ತನ್ನದೇ ದೇಶದ ಸೋಫಿಯಾ ಕೆನಿನ್ರನ್ನು ಸೋಲಿಸಿ ಪ್ರಿಕ್ವಾರ್ಟರ್ಫೈನಲ್ ತಲುಪಿದ್ದಾರೆ. ಗ್ರ್ಯಾನ್ ಸ್ಲಾಮ್ ಚಾಂಪಿಯನ್ಗಳ ನಡುವಿನ ಪಂದ್ಯದಲ್ಲಿ ಮ್ಯಾಡಿಸನ್ ತನ್ನ ಎದುರಾಳಿಯನ್ನು 4-6, 6-3, 7-5 ಸೆಟ್ಗಳಿಂದ ಹಿಮ್ಮೆಟ್ಟಿಸಿದರು.
ಈ ವಿಜಯದೊಂದಿಗೆ 30 ವರ್ಷದ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಚಾಂಪಿಯನ್ ಮ್ಯಾಡಿಸನ್ ಕೀಸ್, ಸೆರೀನಾ ವಿಲಿಯಮ್ಸ್ ಬಳಿಕ ಸತತ 10 ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಪಂದ್ಯಗಳನ್ನು ಗೆದ್ದ ಅತಿ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೆರೀನಾ 2017ರ ಆಸ್ಟ್ರೇಲಿಯನ ಓಪನ್ ಮತ್ತು 2018ರ ವಿಂಬಲ್ಡನ್ ನಡುವೆ ಸತತ 16 ಪಂದ್ಯಗಳನ್ನು ಗೆದ್ದಿದ್ದಾರೆ.
ಅಂತಿಮ 16ರ ಸುತ್ತಿನಲ್ಲಿ, ಮ್ಯಾಡಿಸನ್ ತನ್ನದೇ ದೇಶದ ಹೇಲಿ ಬ್ಯಾಪ್ಟಿಸ್ಟ್ರನ್ನು ಎದುರಿಸಲಿದ್ದಾರೆ.







