ಫ್ರೆಂಚ್ ಓಪನ್: ಅಲ್ಕಾರಝ್ 4ನೇ ಸುತ್ತಿಗೆ

ಅಲ್ಕಾರಝ್ | PTI
ಪ್ಯಾರಿಸ್: ಪ್ಯಾರಿಸ್ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ, ಶುಕ್ರವಾರ ಪುರುಷರ ಸಿಂಗಲ್ಸ್ನಲ್ಲಿ ಸ್ಪೇನ್ನ ಕಾರ್ಲೋಸ್ ಅಲ್ಕಾರಝ್ ನಾಲ್ಕನೇ ಸುತ್ತು ತಲುಪಿದ್ದಾರೆ. ಇಲ್ಲಿನ ರೋಲ್ಯಾಂಡ್ ಗ್ಯಾರೋಸ್ನಲ್ಲಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಅಮೆರಿಕದ ಸೆಬಾಸ್ಟಿಯನ್ ಕೋರ್ಡ ಅವರನ್ನು 6-4, 7-6(5), 6-3 ಸೆಟ್ಗಳಿಂದ ಸೋಲಿಸಿದರು.
ಇದು ಹಾಲಿ ಫ್ರೆಂಚ್ ಓಪನ್ನಲ್ಲಿ ಅಲ್ಕಾರಝ್ರ ಭವ್ಯ ಪ್ರದರ್ಶನವಾಗಿದೆ. ಈ ಪಂದ್ಯವು 2022ರಲ್ಲಿ ಇದೇ ಅಂಗಳದಲ್ಲಿ ನಡೆದ ಮುಖಾಮುಖಿಯ ಮರುಪಂದ್ಯದಂತೆ ಭಾಸವಾಯಿತು. ಈ ಮೂಲಕ ತಾನು ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಪ್ರಬಲ ಆಕಾಂಕ್ಷಿ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಈವರೆಗೆ ಅಲ್ಕಾರಝ್ ಎರಡು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
2023ರಲ್ಲಿ ಇಲ್ಲಿ ಸೆಮಿಫೈನಲ್ ಆಡಿದ್ದ 21 ವರ್ಷದ ಅಲ್ಕಾರಝ್ ತನ್ನ ಆಟದ ಮೂಲಕ ನೆರೆದ ಪ್ರೇಕ್ಷಕರಿಗೆ ಮನರಂಜನೆಯೊದಗಿಸಿದರು.
ಇಗಾ ಸ್ವಿಯಾಟೆಕ್ ಪ್ರಿಕ್ವಾರ್ಟರ್ಫೈನಲ್ಗೆ:
ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ನಲ್ಲಿ ಶುಕ್ರವಾರ ವಿಶ್ವದ ನಂಬರ್ ವನ್ ಆಟಗಾರ್ತಿ ಪೋಲ್ಯಾಂಡ್ನ ಇಗಾ ಸ್ವಿಯಾಟೆಕ್ ಪ್ರಿಕ್ವಾರ್ಟರ್ಫೈನಲ್ ತಲುಪಿದ್ದಾರೆ. ಈ ಮೂಲಕ ಅವರು ತನ್ನ 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಹಾಲಿ ಚಾಂಪಿಯನ್ ಸ್ವಿಯಾಟೆಕ್ ಝೆಕ್ ದೇಶದ ಮೇರೀ ಬೋರ್ಕೊವರನ್ನು 6-4, 6-2 ಸೆಟ್ಗಳಿಂದ ಭರ್ಜರಿಯಾಗಿ ಸೋಲಿಸಿದರು.
ಸ್ವಿಯಾಟೆಕ್ ತನ್ನ ಶ್ರೇಷ್ಠತೆ ಮತ್ತು ತಾಳ್ಮೆಯನ್ನು ಪಂದ್ಯದ ಕೊನೆಯವರೆಗೂ ಕಾಯ್ದುಕೊಂಡರು. ಅವರು ತನ್ನ ಎದುರಾಳಿಯ ಸರ್ವ್ಗಳನ್ನು ನಿಖರತೆಯಿಂದ ಮತ್ತು ಆಕ್ರಮಣಕಾರಿಯಾಗಿ ನಿಭಾಯಿಸಿದರು.
ಎಲೀನಾ ರೈಬಕಿನ 4ನೇ ಸುತ್ತಿಗೆ:
ಫ್ರೆಂಚ್ ಓಪನ್ನ ಇನ್ನೊಂದು ಮಹಿಳಾ ಸಿಂಗಲ್ಸ್ನಲ್ಲಿ, ಕಝಖ್ಸ್ತಾನ್ನ ಎಲೀನಾ ರೈಬಕಿನ ಶುಕ್ರವಾರ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಅವರು ಮೂರನೇ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಮ್ನ ಎಲಿಸ್ ಮೆರ್ಟನ್ಸ್ರನ್ನು 6-4, 6-2 ಸೆಟ್ಗಳಿಂದ ಮಣಿಸಿದರು.
ರಶ್ಯದಲ್ಲಿ ಜನಿಸಿರುವ, ಆದರೆ ಕಝಖ್ಸ್ತಾನದ ಪರವಾಗಿ ಆಡುತ್ತಿರುವ 24 ವರ್ಷದ ರೈಬಕಿನ ಇಲ್ಲಿ 2021ರಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದರು.







