ಫ್ರೆಂಚ್ ಓಪನ್ ಡ್ರಾ | ಚಾಂಪಿಯನ್ ಅಲ್ಕರಾಝ್ಗೆ ನಿಶಿಕೋರಿ ಮೊದಲ ಎದುರಾಳಿ

Photo: PTI
ರೋಮ್: ಪ್ಯಾರಿಸ್ ನ ರೋಲ್ಯಾಂಡ್ ಗ್ಯಾರೊಸ್ ನಲ್ಲಿ ಗುರುವಾರ ನಡೆದ ಡ್ರಾ ಪ್ರಕ್ರಿಯೆಯ ಪ್ರಕಾರ ವಿಶ್ವದ ನಂ.2ನೇ ಆಟಗಾರ ಕಾರ್ಲೊಸ್ ಅಲ್ಕರಾಝ್ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನಿನ ಕೀ ನಿಶಿಕೋರಿ ಅವರನ್ನು ಎದುರಿಸುವ ಮೂಲಕ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಅವರು ತನ್ನ ಟೂರ್ನಿಯ ಮೊದಲ ಪಂದ್ಯದಲ್ಲಿ ಫ್ರಾನ್ಸ್ನ ಅರ್ಥರ್ ರಿಂಡರ್ಕ್ನೆಚ್ ರನ್ನು ಎದುರಿಸಲಿದ್ದಾರೆ. ಇಟಲಿ ಆಟಗಾರ ಸಿನ್ನರ್ 2ನೇ ಸುತ್ತಿನಲ್ಲಿ ಫ್ರಾನ್ಸ್ ನ ಇನ್ನೋರ್ವ ಆಟಗಾರ ರಿಚರ್ಡ್ ಗ್ಯಾಸ್ಕಟ್ ರನ್ನು ಎದುರಿಸುವ ಸಾಧ್ಯತೆಯಿದೆ.
ಅಲೆಕ್ಸಾಂಡರ್ ಝ್ವೆರೆವ್ ಹಾಗೂ ನೊವಾಕ್ ಜೊಕೊವಿಕ್, ಸಿನ್ನರ್ ಹಾಗೂ ಬ್ರಿಟನ್ನ ಜಾಕ್ ಡ್ರಾಪರ್, ಇಟಲಿಯ ಲೊರೆಂರೊ ಮುಸೆಟ್ಟಿ ಹಾಗೂ ಅಮೆರಿಕದ ಟೇಲರ್ ಫ್ರಿಟ್ಜ್ ಹಾಗೂ ಅಲ್ಕರಾಝ್ ಮತ್ತು ಕಾಸ್ಪರ್ ರೂಡ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.
ವಿಶ್ವದನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾ ಅವರು ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಕಮಿಲಿಯಾ ರಖಿಮೋವಾರನ್ನು ಎದುರಿಸುವ ಮೂಲಕ ಫ್ರೆಂಚ್ ಓಪನ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.
5ನೇ ಶ್ರೇಯಾಂಕಿತೆ, 4 ಬಾರಿಯ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಅವರು ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸ್ಲೋವಾಕಿಯಾದ ರೆಬೆಕ್ಕಾ ಸ್ರಾಮ್ಕೋವಾರನ್ನು, ಅಮೆರಿಕದ ಕೊಕೊ ಗೌಫ್ ಆಸ್ಟ್ರೇಲಿಯದ ಒಲಿವಿಯಾ ಗಡೆಸ್ಕಿ ಅವರನ್ನು, ಫ್ರಾನ್ಸ್ನ ಜಾಸ್ಮಿನ್ ಪಯೋಲಿನಿ ಚೀನಾದ ಯುಇ ಯುಯಾನ್ ರನ್ನು ಎದುರಿಸಲಿದ್ದಾರೆ.
ಫ್ರೆಂಚ್ ಓಪನ್ ಟೂರ್ನಿಯು ಮೇ 25ರಿಂದ ಜೂನ್ 8ರ ತನಕ ಪ್ಯಾರಿಸ್ ನಲ್ಲಿ ನಡೆಯಲಿದೆ.







