ಫ್ರೆಂಚ್ ಓಪನ್| ಫೈನಲ್ನಲ್ಲಿ ಎಡವಿದ ಪಿ.ವಿ.ಸಿಂಧು

ಪಿ.ವಿ.ಸಿಂಧು | Photo Credit : PTI
ಪ್ಯಾರಿಸ್: ದಕ್ಷಿಣ ಕೊರಿಯಾದ ಆನ್ ಸೆ-ಯಂಗ್ ವಿರುದ್ಧ ಸತತ ಸೋಲಿನ ಸರಪಳಿಯನ್ನು ತುಂಡರಿಸಿಕೊಳ್ಳುವಲ್ಲಿ ವಿಫಲವಾದ ಪಿ.ವಿ. ಸಿಂಧು ಫ್ರೆಂಚ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಮತ್ತೊಮ್ಮೆ ಎಡವಿದರು.
ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು ವಿಶ್ವದ ನಂ.1 ಆಟಗಾರ್ತಿ ಸೆ-ಯಂಗ್ ವಿರುದ್ಧ 21-16, 11-21, 12-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಸೆ-ಯಂಗ್ ಅವರು ಸಿಂಧು ವಿರುದ್ಧ ಈ ತನಕ ಆಡಿರುವ ಎಲ್ಲ 11 ಪಂದ್ಯಗಳನ್ನು ಗೆದ್ದಿದ್ದಾರೆ.
ಈ ಋತುವಿನಲ್ಲಿ 10ನೇ ವೈಯಕ್ತಿಕ ಪ್ರಶಸ್ತಿಯನ್ನು ಗೆದ್ದಿರುವ ಸೆ-ಯಂಗ್ 2026ರ ಋತುವಿನಲ್ಲಿ ತನ್ನ ಗೆಲುವಿನ ದಾಖಲೆಯನ್ನು 66-1ಕ್ಕೆ ವಿಸ್ತರಿಸಿದರು. ಈ ವರ್ಷ ಇಂಗ್ಲೆಂಡ್ ಓಪನ್ ಫೈನಲ್ನಲ್ಲಿ ವಾಂಗ್ ಝಿ ಯಿ ವಿರುದ್ಧ ಏಕೈಕ ಸೋಲು ಕಂಡಿದ್ದಾರೆ.
ಸಿಂಧು ಮೊದಲ ಗೇಮ್ ಅನ್ನು 21-16 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದರು. ಎರಡನೇ ಗೇಮ್ನಲ್ಲಿ ತಿರುಗಿ ಬಿದ್ದ ಸೆ-ಯಂಗ್ 21-11 ಅಂತರದಿಂದ ಗೆದ್ದುಕೊಂಡರು. ನಿರ್ಣಾಯಕ ಮೂರನೇ ಗೇಮ್ನಲ್ಲಿ ಸಿಂಧು ಆರಂಭದಲ್ಲಿ 8-5ರಿಂದ ಮುನ್ನಡೆಯಲ್ಲಿದ್ದರು. ಆದರೆ ಸೆ-ಯಂಗ್ ತನ್ನ ಎದುರಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿ 21-12 ರಿಂದ ಗೆದ್ದುಕೊಂಡರು.
ಸಿಂಧು ಈ ವರ್ಷ ಆಡಿರುವ ಎರಡನೇ ಸೂಪರ್-750 ಫೈನಲ್ ಪಂದ್ಯ ಇದಾಗಿದೆ. ಜುಲೈನಲ್ಲಿ ಜಪಾನ್ ಓಪನ್ನಲ್ಲಿ ಫೈನಲ್ಗೆ ತಲುಪಿದ್ದ ಸಿಂಧು ಪ್ರಶಸ್ತಿಯನ್ನು ಗೆದ್ದಿದ್ದರು.
ಶನಿವಾರ ನಡೆದ ಸೆಮಿ ಫೈನಲ್ನಲ್ಲಿ ಜಪಾನಿನ ಹಿನಾ ಅಕೆಚಿ ಅವರನ್ನು ಮಣಿಸಿದ ಸಿಂಧು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದರು.ಮತ್ತೊಂದೆಡೆ ಜಪಾನಿನ ನೊರೊಮಿ ಒಕುಹರಾರನ್ನು ಮಣಿಸಿದ ಸೆ-ಯಂಗ್ ಫ್ರೆಂಚ್ ಓಪನ್ನಲ್ಲಿ ಸತತ ಮೂರನೇ ಬಾರಿ ಫೈನಲ್ಗೆ ತಲುಪಿದ್ದರು.






