ನಾಳೆ ಭಾರತ-ಉರುಗ್ವೆ ಫುಟ್ಬಾಲ್ ತಂಡಗಳ ಮಧ್ಯೆ ಸೌಹಾರ್ದ ಪಂದ್ಯ

Photo: X/IndianFootball
ಕೋಲ್ಕತಾ: ಆತಿಥೇಯ ಭಾರತ ಫುಟ್ಬಾಲ್ ತಂಡವು ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ(ಸಾಲ್ಟ್ಲೇಕ್ ಸ್ಟೇಡಿಯಂ)ದಲ್ಲಿ ಮಂಗಳವಾರ ನಡೆಯಲಿರುವ ಸೌಹಾರ್ದ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಉರುಗ್ವೆ ತಂಡವನ್ನು ಎದುರಿಸಲಿದೆ.
ಇತ್ತೀಚೆಗೆ ಕೋಲ್ಕತಾದಲ್ಲಿ ನಡೆದಿದ್ದ ಬ್ರೆಝಿಲ್ ತಂಡದ ವಿರುದ್ಧ ಮತ್ತೊಂದು ಸೌಹಾರ್ದ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವು 0-4 ಗೋಲುಗಳ ಅಂತರದಿಂದ ಸೋತಿತ್ತು.
ಉರುಗ್ವೆ ತಂಡವು ಭಾರತದಲ್ಲಿ ಇದೇ ಮೊದಲ ಬಾರಿ ಫುಟ್ಬಾಲ್ ಪಂದ್ಯವನ್ನಾಡಲು ಕೋಲ್ಕತ್ತಾಕ್ಕೆ ಆಗಮಿಸಿದೆ.
ಬೆಂಗಳೂರಿನಲ್ಲಿ ಪನಾಮ ತಂಡದ ವಿರುದ್ಧ 1-1ರಿಂದ ಡ್ರಾ ಹಾಗೂ ಕೋಲ್ಕತಾದಲ್ಲಿ ಬ್ರೆಝಿಲ್ ವಿರುದ್ಧ ಸೋತ ನಂತರ ಪ್ರಸಕ್ತ ಅಂತರ್ರಾಷ್ಟ್ರೀಯ ವಿಂಡೋದಲ್ಲಿ ಭಾರತ ಫುಟ್ಬಾಲ್ ತಂಡ ಆಡುತ್ತಿರುವ ಮೂರನೇ ಹಾಗೂ ಕೊನೆಯ ಸೌಹಾರ್ದಯುತ ಪಂದ್ಯ ಇದಾಗಿದೆ.
ಬ್ರೆಝಿಲ್ ತಂಡದ ವಿರುದ್ಧದ ಹೀನಾಯ ಸೋಲಿನಿಂದ ಬೇಗನೆ ಚೇತರಿಸಿಕೊಳ್ಳುವುದು ಭಾರತ ತಂಡದ ಮುಂದಿರುವ ಸವಾಲಾಗಿದೆ.
‘‘ನಮ್ಮ ತಂಡವು ಬ್ರೆಝಿಲ್ ವಿರುದ್ಧ ಆರಂಭಿಕ ಹಂತದಲ್ಲಿದ್ದ ಸಕಾರಾತ್ಮಕ ಅಂಶಗಳನ್ನು ಮರು ಸೃಷ್ಟಿಸಬಲ್ಲದು. ಆ ಹಂತದಲ್ಲಿ ಭಾರತವು ಭರವಸೆ ಮೂಡಿಸುವಂತಹ ಸಂಯೋಜಿತ ಆಟವನ್ನು ಪ್ರದರ್ಶಿಸಿತ್ತು. ಶಿಸ್ತುಬದ್ಧವಾಗಿ ರಕ್ಷಣಾತ್ಮಕ ಆಟವಾಡಿದ್ದು, ಪ್ರತಿ ದಾಳಿ ನಡೆಸಲು ಪ್ರಯತ್ನಿಸಿತ್ತು’’ಎಂದು ಭಾರತದ ಮುಖ್ಯ ತರಬೇತುದಾರ ಖಾಲಿದ್ ಜಮೀಲ್ ಹೇಳಿದ್ದಾರೆ.
ಪನಾಮ ತಂಡದ ವಿರುದ್ಧ ಗೋಲು ಗಳಿಸಿದ್ದ ರಿಯಾನ್ ವಿಲಿಯಮ್ಸನ್ ಭಾರತದ ಓರ್ವ ಪ್ರಮುಖ ಅಸ್ತ್ರವಾಗಿ ಉಳಿದಿದ್ದಾರೆ. ಮನ್ವೀರ್ ಸಿಂಗ್, ಸಹಾಲ್ ಅಬ್ದುಲ್ ಸಮದ್ ಬ್ರೆಝಿಲ್ ವಿರುದ್ಧ ಭಾರತಕ್ಕೆ ಭರವಸೆ ಮೂಡಿಸಿದ್ದರು.
ವಿಶ್ವದ 20ನೇ ರ್ಯಾಂಕಿನ ಉರುಗ್ವೆ ತಂಡವು 138ನೇ ರ್ಯಾಂಕಿನ ಭಾರತ ತಂಡಕ್ಕೆ ಅಗ್ನಿ ಪರೀಕ್ಷೆಯೊಡ್ಡುವ ಎಲ್ಲ ಸಾಧ್ಯತೆಯಿದೆ.
1,999 ಬದಲಿಗೆ 199 ರೂ : ಟಿಕೆಟ್ ದರದಲ್ಲಿ ಭಾರೀ ಕಡಿತ
ಸ್ಟಾರ್ ಆಟಗಾರರನ್ನು ಹೊಂದಿರುವ ಬ್ರೆಝಿಲ್ ತಂಡದ ವಿರುದ್ಧ ಪಂದ್ಯ ನಡೆದ ಸಾಲ್ಟ್ಲೇಕ್ ಸ್ಟೇಡಿಯಂನಲ್ಲಿ ಸಾವಿರಾರು ಆಸನಗಳು ಖಾಲಿ ಇದ್ದವು. ಹೀಗಾಗಿ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ(ಎಐಎಫ್ಎಫ್)ಸಾಲ್ಟ್ಲೇಕ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಉರುಗ್ವೆ ವಿರುದ್ಧದ ಪಂದ್ಯದ ಟಿಕೆಟ್ ದರವನ್ನು ಕೇವಲ 199ಕ್ಕೆ ನಿಗದಿಪಡಿಸಿದೆ.
ಸಿ2 ಲೆಫ್ಟ್ ಹಾಗೂ ಸಿ 2 ಲೆಫ್ಟ್ ಬ್ಲಾಕ್ಗಳ ಟಿಕೆಟ್ ದರ ರವಿವಾರದ ಬೆಳಗ್ಗಿನ ತನಕ 1,999 ರೂ. ಇತ್ತು. ಇದೀಗ ಅದರ ದರವನ್ನು ಶೇ.90ರಷ್ಟು ಕಡಿತಗೊಳಿಸಲಾಗಿದ್ದು, ಕೇವಲ 199 ರೂ.ಗೆ ಲಭ್ಯವಿದೆ.
ಅಕ್ಟೋಬರ್ 3ರಂದು ಕೋಲ್ಕತಾದಲ್ಲಿ ನಡೆದಿದ್ದ ಬ್ರೆಝಿಲ್ ತಂಡದ ವಿರುದ್ಧ ಪಂದ್ಯದಲ್ಲಿ 51,402 ಪ್ರೇಕ್ಷಕರು ಹಾಜರಿದ್ದರು. ಕ್ರೀಡಾಂಗಣವು ಸುಮಾರು 85,000 ಆಸನ ಸಾಮರ್ಥ್ಯ ಹೊಂದಿರುವ ಕಾರಣ ವಿನಿಸಿಯಸ್ ಜೂನಿಯರ್, ಗೇಬ್ರಿಯಲ್ ಮ್ಯಾಗಲ್ಹೇಸ್ ಹಾಗೂ ಮಾರ್ಕ್ವಿನೋಸ್ ಅವರಂತಹ ಸ್ಟಾರ್ ಆಟಗಾರರನ್ನು ಒಳಗೊಂಡಿದ್ದ ಬ್ರೆಝಿಲ್ ವಿರುದ್ಧ ಪಂದ್ಯಕ್ಕೆ ಪ್ರೇಕ್ಷಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.
ಎಐಎಫ್ಎಫ್ ರವಿವಾರ ಸಾಮಾಜಿಕ ಮಾಧ್ಯಮದ ಮೂಲಕ ಟಿಕೆಟ್ ದರದಲ್ಲಿ ಭಾರೀ ಕಡಿತವನ್ನು ಘೋಷಿಸಿದೆ. ಮಂಗಳವಾರ ನಡೆಯಲಿರುವ ಉರುಗ್ವೆ ವಿರುದ್ಧದ ಸೌಹಾರ್ದ ಪಂದ್ಯದ ಆಯ್ದ ಬ್ಲಾಕ್ಗಳಿಗೆ ಮಾತ್ರ ಪರಿಷ್ಕೃತ ದರ ಅನ್ವಯವಾಗಲಿದೆ ಎಂದಿದೆ.
ಈ ನಿರ್ಧಾರ ತೆಗೆದುಕೊಂಡ ಸಮಯವು ವಿಶೇಷವಾಗಿ ಗಮನಾರ್ಹವಾಗಿದೆ. ಬ್ರೆಝಿಲ್ ವಿರುದ್ಧದ ಪಂದ್ಯಕ್ಕಿಂತ ಮೊದಲೇ ಟಿಕೆಟ್ ದರಗಳು ಚರ್ಚೆಯ ವಿಷಯವಾಗಿದ್ದವು. ಭಾರತದ ಅತಿದೊಡ್ಡ ಫುಟ್ಬಾಲ್ ಕೇಂದ್ರವೆಂಬ ಹಿರಿಮೆ ಇರುವ ಕೋಲ್ಕತಾದಲ್ಲಿ ನಡೆದ ಪಂದ್ಯಕ್ಕೆ ಪ್ರೇಕ್ಷಕರ ಹಾಜರಾತಿ ಕಡಿಮೆಯಾಗಿದ್ದಕ್ಕೆ ಹೆಚ್ಚಿನ ದರವೂ ಒಂದು ಕಾರಣವೆಂದು ಹೇಳಲಾಗಿತ್ತು.
ಬ್ರೆಝಿಲ್ ತಂಡದ ಭೇಟಿ ಅಪಾರ ನಿರೀಕ್ಷೆ ಹುಟ್ಟುಹಾಕಿತ್ತು. ಐದು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಈ ತಂಡವು ಕೋಲ್ಕತಾಕ್ಕೆ ಸ್ಟಾರ್ ಆಟಗಾರರೊಂದಿಗೆ ಆಗಮಿಸಿತ್ತು. ಭಾರತವು 0-4ರಿಂದ ಸೋತ ಈ ಪಂದ್ಯದ ವೇಳೆ ಸಾಲ್ಟ್ಲೇಕ್ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿರಲಿಲ್ಲ. 51,402 ಪ್ರೇಕ್ಷಕರು ಹಾಜರಾಗಿದ್ದು, 33,000ಕ್ಕೂ ಅಧಿಕ ಆಸನಗಳು ಖಾಲಿಯಾಗಿದ್ದವು.
ಉರುಗ್ವೆ ವಿರುದ್ಧ ಪಂದ್ಯದ ಟಿಕೆಟ್ ದರ ಕಡಿಮೆ ಮಾಡಿರುವುದು ಭಾರತ ಆಡುವ ಅಂತಿಮ ಸೌಹಾರ್ದ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯ ಬೆಂಬಲಿಗರನ್ನು ಕ್ರೀಡಾಂಗಣಕ್ಕೆ ಆಕರ್ಷಿಸುವ ಪ್ರಯತ್ನವಾಗಿದೆ ಎನ್ನಲಾಗಿದೆ.






