ರೋಹಿತ್, ಕೊಹ್ಲಿಯ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು: ಗಂಭೀರ್

ಗಂಭೀರ್, ರೋಹಿತ್, ಕೊಹ್ಲಿ, | PTI
ಹೊಸದಿಲ್ಲಿ: ‘‘ಟೆಸ್ಟ್ ಕ್ರಿಕೆಟ್ನಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಹೊಂದಿರುವುದು ಅವರ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಅವರ ನಿರ್ಧಾರಗಳನ್ನು ಎಲ್ಲರೂ ಗೌರವಿಸಬೇಕು’’ ಎಂದು ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
‘‘ಕ್ರೀಡೆಯನ್ನು ಯಾವಾಗ ಆರಂಭಿಸಬೇಕು ಮತ್ತು ಯಾವಾಗ ಮುಕ್ತಾಯಗೊಳಿಸಬೇಕು ಎನ್ನುವುದು ಅತ್ಯಂತ ವೈಯಕ್ತಿಕ ನಿರ್ಧಾರವಾಗಿದೆ’’ ಸಿಎನ್ಎನ್-ನ್ಯೂಸ್18ಗೆ ನೀಡಿದ ಸಂದರ್ಶನವೊಂದರಲ್ಲಿ ಗಂಭೀರ್ ಹೇಳಿದರು.
‘‘ಯಾವಾಗ ನಿವೃತ್ತಿ ಹೊಂದಬೇಕು ಎಂದು ಯಾರಿಗಾದರೂ ಹೇಳುವ ಹಕ್ಕು ಕೋಚ್ ಗಾಗಲಿ, ಆಯ್ಕೆಗಾರರಿಗಾಗಲಿ ಅಥವಾ ಈ ದೇಶದಲ್ಲಿರುವ ಯಾರಿಗೇ ಆಗಲಿ ಇಲ್ಲ. ಅದು ಒಳಗಿನಿಂದ ಬರುತ್ತದೆ’’ ಎಂದು ಪ್ರಧಾನ ಕೋಚ್ ಅಭಿಪ್ರಾಯಪಟ್ಟರು.
ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಈ ತಿಂಗಳ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಕೋರಿರುವುದನ್ನು ಸ್ಮರಿಸಬಹುದಾಗಿದೆ.
ರೋಹಿತ್, ಕೊಹ್ಲಿ ಅವರ ಅನುಭವದಿಂದ ತಂಡವು ವಂಚಿತವಾಗುತ್ತದೆ ಎನ್ನುವುದನ್ನು ಗಂಭೀರ್ ಒಪ್ಪಿಕೊಂಡರಾದರೂ, ಇದು ಕಿರಿಯ ಆಟಗಾರರಿಗೆ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು. ‘‘ಹೌದು, ಅವರ ಅನುಪಸ್ಥಿತಿಯು ಸವಾಲಿನದ್ದಾಗಿದೆ. ಆದರೆ, ಖಂಡಿತವಾಗಿಯೂ ಅದನ್ನು ನಿಭಾಯಿಸಲು ನಮ್ಮಲ್ಲಿ ಜನರಿದ್ದಾರೆ. ತಂಡದಿಂದ ಹೊರಗೆ ಹೋಗುವವರು, ದೇಶಕ್ಕಾಗಿ ವಿಶೇಷವಾದ ಏನನ್ನಾದರೂ ಮಾಡಲು ಇತರ ವ್ಯಕ್ತಿಗಳಿಗೆ ಅವಕಾಶ ನೀಡುತ್ತಾರೆ’’ ಎಂದು ನುಡಿದರು.
ಜಸ್ಪ್ರಿತ್ ಬುಮ್ರಾರ ಅನುಪಸ್ಥಿತಿಯಲ್ಲಿ ಭಾರತವು ಚಾಂಪಿಯನ್ಸ್ ಟ್ರೋಫಿ ಜಯಿಸಿರುವುದನ್ನು ಅವರು ಉಲ್ಲೇಖಿಸಿದರು. ಹಿರಿಯ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ತಂಡವು ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ ಎಂದು ಗಂಭೀರ್ ನುಡಿದರು.







