ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಸೌರವ್ ಗಂಗುಲಿ ಅವಿರೋಧ ಆಯ್ಕೆ ಸಾಧ್ಯತೆ

ಸೌರವ್ ಗಂಗುಲಿ | PC : PTI
ಕೋಲ್ಕತಾ, ಸೆ.21: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಸೋಮವಾರ ನಡೆಯಲಿರುವ ಬಂಗಾಳ ಕ್ರಿಕೆಟ್ ಸಂಸ್ಥೆಯ(ಸಿಎಬಿ)ವಾರ್ಷಿಕ ಮಹಾಸಭೆಯ ವೇಳೆ ಅವಿರೋಧವಾಗಿ ಮತ್ತೊಮ್ಮೆ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಯಿದೆ.
ಕ್ರಿಕೆಟ್ ಮಂಡಳಿಯು ಸದ್ಯ ಹಣಕಾಸಿನ ಅಕ್ರಮಗಳು ಹಾಗೂ ವಿಶ್ವಾಸಾರ್ಹತೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗಂಗುಲಿ ಪಾಲಿಗೆ ಅಧ್ಯಕ್ಷರಾಗಿ 2ನೇ ಅವಧಿಯು ಹೆಚ್ಚು ಸವಾಲಿನಿಂದ ಕೂಡಿದೆ ಎಂದು ಪಿಟಿಐ ವರದಿ ಮಾಡಿದೆ.
ಬಬ್ಲು ಕೋಲೆ(ಕಾರ್ಯದರ್ಶಿ),ಮದನ್ ಮೋಹನ್ ಘೋಷ್(ಜಂಟಿ-ಕಾರ್ಯದರ್ಶಿ), ಸಂಜಯ್ ದಾಸ್(ಖಜಾಂಚಿ) ಹಾಗೂ ಅನು ದತ್ತ(ಉಪಾಧ್ಯಕ್ಷ) ಅವರನ್ನು ಒಳಗೊಂಡಿರುವ ಗಂಗುಲಿ ನೇತೃತ್ವದ ಸಂಪೂರ್ಣ ಸಮಿತಿಯು ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ.
53ರ ಹರೆಯದ ಬಿಸಿಸಿಐನ ಮಾಜಿ ಅಧ್ಯಕ್ಷ ಗಂಗುಲಿ ಅವರು ತನ್ನ ಹಿರಿಯ ಸಹೋದರ ಸ್ನೇಹಶೀಶ್ ಗಂಗುಲಿ ಅವರಿಂದ ತೆರವಾಗಿರುವ ಅಧ್ಯಕ್ಷ ಸ್ಥಾನವನ್ನು ತುಂಬಲಿದ್ದಾರೆ.
ಇತ್ತೀಚೆಗಿನ ತಿಂಗಳುಗಳಲ್ಲಿ ವಿವಾದಗಳಿಂದಾಗಿ ಸಿಎಬಿಯ ವರ್ಚಸ್ಸು ಹಾಳಾಗಿದೆ. ರಣಜಿ ಟ್ರೋಫಿ ತಂಡದ ಪ್ರದರ್ಶನವೂ ನೀರಸವಾಗಿದೆ. ಸ್ವಹಿತಾಸಕ್ತಿಯ ಸಂಘರ್ಷಕ್ಕಾಗಿ ಹಣಕಾಸು ಸಮಿತಿಯ ಸದಸ್ಯ ಸುಬ್ರತಾ ಸಹಾ ಅವರಿಗೆ 2 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಉಪ ಸಮಿತಿಯ ಚಟುವಟಿಕೆಗಳಿಂದ ನಿಷೇಧಿಸಲಾಗಿದೆ. ಆಗಸ್ಟ್ನಲ್ಲಿ ಆರ್ಥಿಕ ದುರುಪಯೋಗದ ಆರೋಪದ ಮೇಲೆ ಜಂಟಿ ಕಾರ್ಯದರ್ಶಿ ದೇಬಬ್ರತ ದಾಸ್ ಅವರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು.







