ಓವಲ್ ಮೈದಾನದ ಕ್ಯುರೇಟರ್ ಜೊತೆ ಗೌತಮ್ ‘ಗಂಭೀರ’ ವಾಗ್ವಾದ!
ಜಗಳ ಬಿಡಿಸಿದ ಭಾರತದ ಬ್ಯಾಟಿಂಗ್ ಕೋಚ್

PC : PTI
ಲಂಡನ್, ಜು. 29: ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಟೆಸ್ಟ್ ಸರಣಿಯ ಕೊನೆಯ ಹಾಗೂ ಐದನೇ ಪಂದ್ಯ ಆರಂಭವಾಗಲು ಎರಡು ದಿನಗಳು ಬಾಕಿ ಇರುವಾಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ದಿ ಓವಲ್ ಮೈದಾನದ ಕ್ಯುರೇಟರ್ ಲೀ ಫೋರ್ಟಿಸ್ ಅವರೊಂದಿಗೆ ಮಂಗಳವಾರ ತೀವ್ರ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಟೀಮ್ ಇಂಡಿಯಾವು ಸೋಮವಾರ ಲಂಡನ್ ಗೆ ತಲುಪಿದೆ. ಮಂಗಳವಾರ ತನ್ನ ಮೊದಲ ಸೆಶನ್ ನಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಪ್ರವಾಸಿ ತಂಡಕ್ಕೆ ಒದಗಿಸಿರುವ ವ್ಯವಸ್ಥೆಗಳಿಗೆ, ಪ್ರಾಕ್ಟೀಸ್ ಪಿಚ್ ಪರಿಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗಂಭೀರ್-ಮೈದಾನದ ಕ್ಯುರೇಟರ್ ನಡುವಿನ ಸಂಭಾಷಣೆಯು ದೊಡ್ಡ ವಾಗ್ವಾದಕ್ಕೆ ಕಾರಣವಾಯಿತು. ಕೋಚ್ ಗಂಭೀರ್ ಭಾರೀ ಕೋಪಗೊಂಡಂತೆ ಕಂಡುಬಂದರು. ಗಂಭೀರ್ ಅವರು ಪದೇ ಪದೇ ಮೈದಾನದ ಸಿಬ್ಬಂದಿಯತ್ತ ಬೆರಳು ತೋರಿಸುತ್ತಾ, ‘‘ನಾವು ಏನು ಮಾಡಬೇಕೆಂದು ನೀವು ನಮಗೆ ಹೇಳಬೇಕಾಗಿಲ್ಲ’’ಎಂದು ರೇಗಾಡಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ, ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಹಾಗೂ ಭಾರತೀಯ ಸಹಾಯಕ ಸಿಬ್ಬಂದಿ ವಿಭಾಗದ ಇತರ ಸದಸ್ಯರು ಮಧ್ಯಪ್ರವೇಶಿಸಿ ಇಬ್ಬರ ಜಗಳವನ್ನು ಬಿಡಿಸಿದ್ದಾರೆ.
ಪ್ರಾಕ್ಟೀಸ್ ಏರಿಯಾದ ಒಂದು ಮೂಲೆಗೆ ಫೋರ್ಟಿಸ್ ಅವರನ್ನು ಕರೆದೊಯ್ದ ಕೋಟಕ್ ಅವರು ಸುದೀರ್ಘ ಚರ್ಚೆ ನಡೆಸಿದರು. ಕೋಟಕ್ ಮಧ್ಯಪ್ರವೇಶಿಸಿದ ನಂತರ ಗಂಭೀರ್ ಹಾಗೂ ಫೋರ್ಟಿಸ್ ಇಬ್ಬರೂ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡರು. ಭಾರತ ತಂಡದ ಕೋಚ್ ಗಂಭೀರ್ ಅವರು ನೆಟ್ ಸೆಶನ್ ನ ಮೇಲ್ವಿಚಾರಣೆಗೆ ಮರಳಿದರು.
ಗಂಭೀರ್ ಹಾಗೂ ಪಿಚ್ ಕ್ಯುರೇಟರ್ ನಡುವಿನ ಜಗಳದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಓವಲ್ ಮೈದಾನದ ಕ್ಯುರೇಟರ್ ಭಾರತದ ಮುಖ್ಯ ಕೋಚ್ ಗಂಭೀರ್ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ವಿಚಲಿತರಾಗದ ಗಂಭೀರ್, ‘‘ನೀವು ಹೋಗಿ ನಿಮಗೆ ಬೇಕಾದವರಿಗೆ ವರದಿ ಮಾಡಿ, ಆದರೆ ನಾವು ಏನು ಮಾಡಬೇಕೆಂದು ನಮಗೆ ಹೇಳಲು ಬರಬೇಡಿ’’ ಎಂದು ಕೂಗಾಡಿದರು ಎಂದು ವರದಿಯಾಗಿದೆ.
ಗಂಭೀರ್ ಜೊತೆಗೆ ವಾಗ್ವಾದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಓವಲ್ ಮೈದಾನದ ಕ್ಯುರೇಟರ್ ಲೀ ಫೋರ್ಟಿಸ್, ‘‘ನೀವು ಅವರ ಬಳಿ ಈ ಬಗ್ಗೆ ಕೇಳಬೇಕು. ನಾನು ಈಗ ಚೆನ್ನಾಗಿದ್ದೇನೆ. ಇಲ್ಲಿ ನಾವು ಮರೆ ಮಾಚಲು ಏನೂ ಇಲ್ಲ’’ ಎಂದು ಹೇಳಿದರು.
ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಗುರುವಾರ ಆರಂಭವಾಗಲಿದೆ.
►ಗಿಲ್ ನಾಯಕತ್ವದ ಅರ್ಹತೆ ಪ್ರಶ್ನಿಸಿದವರನ್ನು ಟೀಕಿಸಿದ ಗಂಭೀರ್
ಭಾರತ ತಂಡವು ಮ್ಯಾಂಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿ ಮರು ಹೋರಾಟವನ್ನು ನೀಡಿದ ನಂತರ ಗಂಭೀರ್ ಅವರು ನಾಯಕ ಶುಭಮನ್ ಗಿಲ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಗಿಲ್ ಅವರ ನಾಯಕತ್ವದ ಅರ್ಹತೆಯನ್ನು ಅನುಮಾನಿಸಿದವರನ್ನು ಟೀಕಿಸಿದ್ದಾರೆ.
‘‘ಶುಭಮನ್ ಗಿಲ್ ಅವರ ಪ್ರತಿಭೆಯ ಬಗ್ಗೆ ಯಾವುದೆ ಸಂದೇಹವಿಲ್ಲ. ಯಾರಿಗಾದರೂ ಅನುಮಾನಗಳಿದ್ದರೆ, ಅವರು ಬಹುಶಃ ಕ್ರಿಕೆಟ್ ಅನ್ನು ಅರ್ಥಮಾಡಿಕೊಂಡಿಲ್ಲ. ಕೆಲವು ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೆಲೆಗೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಗಿಲ್ ಏನು ಮಾಡಿದ್ದಾರೆಂಬ ಬಗ್ಗೆ ಡ್ರೆಸ್ಸಿಂಗ್ ರೂಮ್ ನಲ್ಲಿರುವ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ’’ಎಂದು ಗಂಭೀರ್ ಹೇಳಿದರು.







