ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

ಗೌತಮ್ ಗಂಭೀರ್ | Photo Credit : PTI
ಹೊಸದಿಲ್ಲಿ, ನ.26: ಟೀಮ್ ಇಂಡಿಯಾವು ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಡಿ ಸ್ವದೇಶದಲ್ಲಿ ಎರಡನೇ ಬಾರಿ ವೈಟ್ ವಾಶ್ ಮುಖಭಂಗಕ್ಕೆ ಒಳಗಾಗಿದೆ. ಬುಧವಾರ ಗುವಾಹಟಿಯ ಎಸಿಎ ಸ್ಟೇಡಿಯಂನಲ್ಲಿ ಎರಡು ಪಂದ್ಯಗಳ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡಿದೆ.
ಗಂಭೀರ್ 2024ರ ಜುಲೈನಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಈ ತನಕ 19 ಟೆಸ್ಟ್ ಪಂದ್ಯಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು, ಈ ಪೈಕಿ 10ರಲ್ಲಿ ಸೋಲುಂಡಿದ್ದಾರೆ. ಕೇವಲ 7ರಲ್ಲಿ ಗೆಲುವು ಪಡೆದಿದ್ದಾರೆ. ಎರಡು ಪಂದ್ಯ ಡ್ರಾ ನಲ್ಲಿ ಕೊನೆಗೊಂಡಿದೆ. ಗಂಭೀರ್ ಕೋಚಿಂಗ್ ನಲ್ಲಿ ಆರು ಸಂಪೂರ್ಣ ಸರಣಿಯನ್ನು ಆಡಿರುವ ಭಾರತವು ಎರಡರಲ್ಲಿ ಜಯ, ಮೂರರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ.
ಭಾರತ ತಂಡವು ಇದೀಗ ಗಂಭೀರ್ ಮಾರ್ಗದರ್ಶನದಲ್ಲಿ ಸ್ವದೇಶದಲ್ಲಿ ಸತತ ಎರಡನೇ ಬಾರಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆ ಒಳಗಾಗಿದೆ. 2024ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 0-3 ಅಂತರದಿಂದ ಸರಣಿ ಸೋತಿದ್ದ ಭಾರತ ತಂಡವು ಇದೀಗ ಹರಿಣ ಪಡೆಗಳ ವಿರುದ್ಧ 0-2 ಅಂತರದಿಂದ ಸೋಲುಂಡಿದೆ.
60 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ತಂಡವು ಸ್ವದೇಶದಲ್ಲಿ ಆಡಿರುವ ಹಿಂದಿನ ಏಳು ಟೆಸ್ಟ್ ಪಂದ್ಯಗಳ ಪೈಕಿ ಐದರಲ್ಲಿ ಸೋಲುಂಡಿದೆ.
►ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡದ ಕೋಚ್ ಗಳ ಸಾಧನೆ
ಕೋಚ್ ಪಂದ್ಯಗಳು ಗೆಲುವು ಸೋಲು ಡ್ರಾ
ಗೌತಮ್ ಗಂಭೀರ್ 19 7 10 2
ರಾಹುಲ್ ದ್ರಾವಿಡ್ 24 14 7 3
ರವಿ ಶಾಸ್ತ್ರಿ 43 25 13 5
ಅನಿಲ್ ಕುಂಬ್ಳೆ 17 12 1 4
ಡಂಕನ್ ಫ್ಲೆಚರ್ 39 13 17 9
ಗ್ಯಾರಿ ಕರ್ಸ್ಟನ್ 33 16 6 11
ಗ್ರೆಗ್ ಚಾಪೆಲ್ 18 7 4 7
ಜಾನ್ ರೈಟ್ 52 21 15 16







