ಗಂಭೀರ್ ರನ್ನು ತಕ್ಷಣಕ್ಕೆ ವಜಾಗೊಳಿಸುವ ಉದ್ದೇಶವಿಲ್ಲ: ಬಿಸಿಸಿಐ

ಗೌತಮ್ ಗಂಭೀರ್ | Photo Credit : PTI
ಮುಂಬೈ, ನ. 27: ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಭಾರತ ಸೋತ ಹಿನ್ನೆಲೆಯಲ್ಲಿ, ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ರನ್ನು ಹುದ್ದೆಯಿಂದ ತೆಗೆಯುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲಗಳು ತಿಳಿಸಿರುವುದಾಗಿ NDTV ವರದಿ ಮಾಡಿದೆ.
ಒಂದು ವರ್ಷದ ಅವಧಿಯಲ್ಲಿ ಭಾರತವು ತವರಿನಲ್ಲಿ ತನ್ನ ಎರಡನೇ ಟೆಸ್ಟ್ ಸರಣಿ ಸೋಲು ಅನುಭವಿಸಿದ ಬಳಿಕ, ಕೋಚ್ ಆಗಿ ಗಂಭೀರ್ ರ ಭವಿಷ್ಯದ ಬಗ್ಗೆ ಭಾರೀ ಊಹಾಪೋಹಗಳು ಎದ್ದಿದ್ದವು. ಭಾರತೀಯ ಟೆಸ್ಟ್ ತಂಡದ ಕೋಚ್ ಆಗಿ ಗಂಭೀರ್ ಸ್ಥಾನವನ್ನು ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಊಹಾಪೋಹಗಳೂ ಇದ್ದವು.
ಆದರೆ, ಬಿಸಿಸಿಐ ಗಂಭೀರ್ ಮೇಲೆ ಇಟ್ಟಿರುವ ವಿಶ್ವಾಸ ಮುಂದುವರಿಯಲಿದೆ. ತಂಡವನ್ನು ಪುನರ್ನಿರ್ಮಿಸುವ ಕಾರ್ಯದಲ್ಲಿ ಗಂಭೀರ್ ಗೆ ಸಂಪೂರ್ಣ ಬೆಂಬಲವನ್ನು ನೀಡಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ. ದಕ್ಷಿಣ ಆಫ್ರಿಕ ವಿರುದ್ಧದ ಬಿಳಿ ಚೆಂಡಿನ ಸರಣಿಯ ಕೊನೆಯಲ್ಲಿ ತಂಡಾಡಳಿತ ಮತ್ತು ಆಯ್ಕೆಗಾರರ ನಡುವೆ ಒಂದು ಸಭೆ ನಡೆಯಲಿದೆ ಎಂಬುದಾಗಿಯೂ ಮೂಲಗಳು ತಿಳಿಸಿವೆ.
‘‘ಈ ಕ್ಷಣದಲ್ಲಿ ನಾವು ಗೌತಮ್ ಗಂಭೀರ್ ರನ್ನು ಬದಲಾಯಿಸಲು ಹೋಗುವುದಿಲ್ಲ. ಅವರು ತಂಡವನ್ನು ಮರುನಿರ್ಮಿಸುತ್ತಿದ್ದಾರೆ. ಅವರ ಗುತ್ತಿಗೆ 2027ರ ವಿಶ್ವಕಪ್ವರೆಗೆ ಚಾಲ್ತಿಯಲ್ಲಿರುತ್ತದೆ’’ ಎಂದು ಅವು ಹೇಳಿವೆ. ‘‘ದಕ್ಷಿಣ ಆಫ್ರಿಕ ಪ್ರವಾಸ ಕೊನೆಯಲ್ಲಿ ತಂಡಾಡಳಿತ ಮತ್ತು ಆಯ್ಕೆಗಾರರ ನಡುವೆ ಸಭೆ ನಡೆಯುತ್ತದೆ. ಟೆಸ್ಟ್ ತಂಡದ ನಿರ್ವಹಣೆ ಬಗ್ಗೆ ಗಂಭೀರ್ ರಲ್ಲಿ ವಿವರಣೆ ಕೇಳಲಾಗುವುದು’’ ಎಂದು ಮೂಲಗಳು ಹೇಳಿವೆ.







