ರೋಹಿತ್, ವಿರಾಟ್ ಕೊಹ್ಲಿಯನ್ನು ಹಾಡಿಹೊಗಳಿದ ಗೌತಮ್ ಗಂಭೀರ್

PC: X
ಹೊಸದಿಲ್ಲಿ: ಭಾರತದ ಕ್ರಿಕೆಟ್ ತಂಡದ ಚಿಂತಕರ ಚಾವಡಿಯು ಮುಂಬರುವ ಟಿ-20 ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ಪ್ರಯತ್ನಿಸುತ್ತಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಈ ಎಲ್ಲ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ. ಇದೀಗ ಇಬ್ಬರು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ನೀಡಿರುವ ಪ್ರದರ್ಶನದಿಂದ ಸಂತಸಗೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕ ಸಹಿತ 302 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ‘ಸರಣಿಶ್ರೇಷ್ಠ’ ಪ್ರಶಸ್ತಿಯನ್ನು ಪಡೆದಿದ್ದರು. ರೋಹಿತ್ ಕೂಡ ಅರ್ಧಶತಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ.
ಈ ಇಬ್ಬರು ಆಟಗಾರರು ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಕೋಚ್ ಗಂಭೀರ್, ‘‘ಈ ಇಬ್ಬರು ಗುಣಮಟ್ಟದ ಆಟಗಾರರು. ಇವರು ವಿಶ್ವ ದರ್ಜೆಯ ಆಟಗಾರರು ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಇವರು ಕ್ವಾಲಿಟಿ ಆಟಗಾರರು. ಡ್ರೆಸ್ಸಿಂಗ್ ರೂಮ್ ನಲ್ಲಿ ಈ ಇಬ್ಬರ ಅನುಭವವು ನಿಜವಾಗಿಯೂ ಮುಖ್ಯವಾಗಿದೆ’’ ಎಂದರು.
‘‘ಅವರು ಏನು ಮಾಡಬೇಕೊ ಅದನ್ನು ಮಾಡಿದ್ದಾರೆ. ಭಾರತೀಯ ಕ್ರಿಕೆಟಿಗೆ ದೀರ್ಘ ಸಮಯದಿಂದ ಅವರು ಕೊಡುಗೆ ನೀಡುತ್ತಾ ಬಂದಿದ್ದಾರೆ. ಟಿ-20 ಕ್ರಿಕೆಟ್ ಹಾಗೂ 50 ಓವರ್ ಕ್ರಿಕೆಟಿಗೆ ಸ್ಥಿರ ಪ್ರದರ್ಶನ ನೀಡುವುದು ಅತ್ಯಂತ ಮುಖ್ಯವಾಗಿದೆ’’ಎಂದು ದಕ್ಷಿಣ ಆಫ್ರಿಕಾ ವಿರುದ್ಧ್ದ ಮೂರನೇ ಪಂದ್ಯವನ್ನು 9 ವಿಕೆಟ್ ಗಳ ಅಂತರದಿಂದ ಗೆದ್ದ ನಂತರ ಸುದ್ದಿಗೋಷ್ಠಿಯಲ್ಲಿ ಗಂಭೀರ್ ತಿಳಿಸಿದರು.







