ಗ್ಲೋಬಲ್ ಚೆಸ್ ಲೀಗ್: ಚೆಕ್ ಮುಂಬಾ ಮಾಸ್ಟರ್ಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಆಲ್ಪೈನ್ ಪೈಪರ್ಸ್
ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ವಿರುದ್ಧ ಗಂಗಸ್ ಗ್ರ್ಯಾಂಡ್ ಮಾಸ್ಟರ್ಸ್ ಗೆ ಜಯ

Photo : ANI
ಬೆಂಗಳೂರು: ಹಾಲಿ ಚಾಂಪಿಯನ್ ಅಲ್ಪೈನ್ ಎಪಿಎಲ್ ಪೈಪರ್ಸ್ ತಂಡವು ತನ್ನ ನಿಕಟ ಪ್ರತಿಸ್ಪರ್ಧಿ ಚೆಕ್ ಮುಂಬಾ ಮಾಸ್ಟರ್ಸ್ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮತ್ತೊಂದೆಡೆ, ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವನ್ನು ಮಣಿಸಿದ ಗಂಗಸ್ ಗ್ರ್ಯಾಂಡ್ ಮಾಸ್ಟರ್ಸ್ ಆರು ಸುತ್ತುಗಳ ಬಳಿಕ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಬೆಂಗಳೂರು ಆತಿಥ್ಯದಲ್ಲಿ ಟೆಕ್ ಮಹೀಂದ್ರಾ ಮತ್ತು ವಿಶ್ವ ಚೆಸ್ ಒಕ್ಕೂಟದ (ಫಿಡೆ) ಜಂಟಿ ಉಪಕ್ರಮವಾದ ಗ್ಲೋಬಲ್ ಚೆಸ್ ಲೀಗ್ (ಜಿಸಿಎಲ್) ನಾಲ್ಕನೇ ಆವೃತ್ತಿಯ ಐದನೇ ದಿನದ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಪೈಪರ್ಸ್ ತಂಡವು ಮುಂಬಾ ಮಾಸ್ಟರ್ಸ್ ವಿರುದ್ಧ 11-6 ಅಂತರದ ಗೆಲುವು ದಾಖಲಿಸಿತು. ಬಳಿಕ ಗಂಗಸ್ ಗ್ರ್ಯಾಂಡ್ ಮಾಸ್ಟರ್ಸ್ ತಂಡವು ಎರಡು ಬಾರಿಯ ಚಾಂಪಿಯನ್ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡವನ್ನು 15-3 ಅಂತರದಿಂದ ಮಣಿಸಿತು.
ಮುಂಬಾ ಮಾಸ್ಟರ್ಸ್ ಗೆ ದಿನದಲ್ಲಿ ಮತ್ತೊಂದು ಆಘಾತ ಎದುರಾಗಿದ್ದು, ಪಿಬಿಜಿ ಅಲಾಸ್ಕನ್ ನೈಚ್, ವಿರುದ್ಧವೂ 6-11 ಅಂತರದಿಂದ ಸೋಲು ಕಂಡಿತು.
ಅಗ್ರ ಎರಡು ಸ್ಥಾನಗಳ ಪೈಪೋಟಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ದಿನದ ಮೊದಲ ಪಂದ್ಯದಲ್ಲೇ ಪೈಪರ್ಸ್ ಮತ್ತು ಮುಂಬಾ ಮಾಸ್ಟರ್ಸ್ ತಂಡಗಳು ಮುಖಾಮುಖಿಯಾದವು. ಮಂಗಳವಾರ ಲೀಗ್ನ ಅರ್ಧ ಹಂತದ ವೇಳೆಗೆ ಉಭಯ ತಂಡಗಳು ಮ್ಯಾಚ್ ಪಾಯಿಂಟ್ ಹಾಗೂ ಗೇಮ್ ಪಾಯಿಂಟ್ಗಳಲ್ಲಿ ಸಮಬಲ ಸಾಧಿಸಿದ್ದವು. ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದವು. ಆದರೆ ಬುಧವಾರ ಬಿಳಿ ಕಾಯಿಗಳೊಂದಿಗೆ ಆಡಿದ ಪೈಪರ್ಸ್ ಆಟಗಾರರು ಬಹುತೇಕ ಬೋರ್ಡ್ಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ 31ನೇ ನಡೆಗಳಲ್ಲಿ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ಅವರನ್ನು ಮಣಿಸಿದರು. ಎರಡನೇ ಬೋರ್ಡ್ನಲ್ಲಿ ಅನೀಶ್ ಗಿರಿ ಅವರು ಎಂ. ಪ್ರಣೇಶ್ ವಿರುದ್ಧ 10ನೇ ನಡೆಯಲ್ಲೇ ಮೇಲುಗೈ ಸಾಧಿಸಿ, ಕೊನೆಯವರೆಗೂ ಅದನ್ನು ಬಿಟ್ಟುಕೊಡಲಿಲ್ಲ.
ವೊಲೊಡಾರ್ಮುರ್ಜಿನ್ 52ನೇ ನಡೆಗಳ ಬಳಿಕ ಬರ್ಡಿಯಾ ದಾನೇಶ್ವರ್ ಅವರನ್ನು ಶರಣಾಗುವಂತೆ ಮಾಡಿ, ಆರು ಪಂದ್ಯಗಳಲ್ಲಿ ಪೈಪರ್ಸ್ನ ನಾಲ್ಕನೇ ಗೆಲುವನ್ನು ಖಚಿತಪಡಿಸಿದರು. ದಿವ್ಯಾ ದೇಶಮುಖ್ ವಿರುದ್ಧ ಡಿ. ಹರಿಕಾ ಸಾಧಿಸಿದ ಗೆಲುವು ಮುಂಬಾ ಮಾಸ್ಟರ್ಸ್ ತಂಡಕ್ಕೆ ದೊರೆತ ಏಕೈಕ ಸಮಾಧಾನವಾಯಿತು.
ಇದಾದ ಬಳಿಕ ಗಂಗಸ್ ಗ್ರ್ಯಾಂಡ್ ಮಾಸ್ಟರ್ಸ್ ತಂಡವು ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿತು. ಈ ಬಾರಿ ಕಪ್ಪು ಕಾಯಿಗಳೊಂದಿಗೆ ಆಡಿದ ಗ್ರ್ಯಾಂಡ್ ಮಾಸ್ಟರ್ಸ್ ಪಂದ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಿತು. ಪಂದ್ಯದ ಆರಂಭದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ಕಿಂಗ್ಸ್ ತಂಡ ಉತ್ತಮ ಸಿದ್ಧತೆಯೊಂದಿಗೆ ಕಣಕ್ಕಿಳಿದಂತೆ ಕಂಡಿತು. ಅಭಿಯಾನದ ಕಳಪೆ ಆರಂಭದ ಬಳಿಕ ತಂಡ ತನ್ನ ಚೇತರಿಕೆಯನ್ನು ಮುಂದುವರಿಸುವ ಸೂಚನೆಯನ್ನೂ ನೀಡಿತ್ತು. ಆದರೆ ಆರು ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿರುವ ಗಂಗಸ್ ಗ್ರ್ಯಾಂಡ್ ಮಾಸ್ಟರ್ಸ್ನ ಪೊಲಿನಾ ಶುವಾಲೋವಾ, ಝು ಜಿನರ್ ವಿರುದ್ಧ ಪಂದ್ಯದ ಚಿತ್ರಣವನ್ನೇ ಬದಲಿಸಿ 47ನೇ ನಡೆಗಳಲ್ಲಿ ಜಯ ಸಾಧಿಸಿದರು. ನಂತರ ಪ್ರಾಡಿಜಿ ಬೋರ್ಡ್ನಲ್ಲಿ ಪ್ರಣವ್ ವಿ. ಮಾಡಿದ ತಪ್ಪಿನ ಲಾಭ ಪಡೆದ ಲ್ಯೂಕ್ ಲಿಯಾನ್ ಮೆಂಡೋನ್ಕಾ ಗೆಲುವು ದಾಖಲಿಸಿದರು.






