ಜರ್ಮನಿ ಗೋಲ್ಕೀಪರ್ ಮ್ಯಾನ್ವೆಲ್ ನೋಯ ನಿವೃತ್ತಿ

ಮ್ಯಾನ್ವೆಲ್ ನೋಯ | NDTV
ಬರ್ಲಿನ್ : ಜರ್ಮನಿ ಫುಟ್ಬಾಲ್ ತಂಡದ ಗೋಲ್ಕೀಪರ್ ಮ್ಯಾನ್ವೆಲ್ ನೋಯ ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಜರ್ಮನಿ ಫುಟ್ಬಾಲ್ ತಂಡದೊಂದಿಗಿನ ಅವರ 15 ವರ್ಷಗಳ ಭಾಗೀದಾರಿಕೆ ಕೊನೆಗೊಂಡಿದೆ.
ನೋಯ ಜರ್ಮನಿಯ ಪರವಾಗಿ 124 ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಒಂದು ದಶಕಕ್ಕೂ ಅಧಿಕ ಕಾಲ ನಂಬರ್ ವನ್ ಗೋಲ್ಕೀಪರ್ ಆಗಿದ್ದರು.
ಅವರಿದ್ದ ತಂಡವು 2014ರಲ್ಲಿ ವಿಶ್ವಕಪ್ ಗೆದ್ದಿತು. ಆದರೆ ಅವರ ನಾಯಕತ್ವದ ತಂಡವು 2018 ಮತ್ತು 2022ರ ವಿಶ್ವಕಪ್ಗಳಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತು.
ನೋಯ ತನ್ನ ನಿರ್ಧಾರವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಘೋಷಿಸಿದ್ದಾರೆ. ‘‘ಒಂದು ದಿನ ಈ ದಿನ ಬರಲೇಬೇಕಾಗಿತ್ತು. ಇಂದು ಆಟಗಾರನಾಗಿ ಜರ್ಮನ್ ರಾಷ್ಟ್ರೀಯ ತಂಡದ ಜೊತೆಗಿನ ನನ್ನ ಒಡನಾಟ ಮುಗಿಯುತ್ತದೆ. ಈ ನಿರ್ಧಾರವನ್ನು ತೆಗೆದುಕೊಳ್ಳುವುದು ನನಗೆ ಸುಲಭವಾಗಿರಲಿಲ್ಲ ಎನ್ನುವುದು ನನ್ನನ್ನು ಬಲ್ಲ ಎಲ್ಲರಿಗೂ ಗೊತ್ತಿದೆ.’’ ಎಂದು ಅವರು ಹೇಳಿದ್ದಾರೆ.
38 ವರ್ಷದ ನೋಯ ಕೊನೆಯದಾಗಿ ಜರ್ಮನಿಯ ಪರವಾಗಿ ಆಡಿದ್ದು ಇತ್ತೀಚೆಗೆ ಸ್ವದೇಶದಲ್ಲಿ ನಡೆದ ಯುರೋಪಿಯನ್ ಚಾಂಪಿಯನ್ಶಿಪ್ಸ್ನಲ್ಲಿ. ಆ ಪಂದ್ಯಾವಳಿಯಲ್ಲಿ ಜರ್ಮನಿಯನ್ನು ಸ್ಪೇನ್ ಕ್ವಾರ್ಟರ್ಫೈನಲ್ನಲ್ಲಿ ಸೋಲಿಸಿತು. ಅಂತಿಮವಾಗಿ ಸ್ಪೇನ್ ಪ್ರಶಸ್ತಿ ಎತ್ತಿತು.
ಇನ್ನು ನಾನು ನನ್ನ ಕ್ಲಬ್ ಬೇಯರ್ನ್ನ ಪಂದ್ಯಗಳ ಮೇಲೆ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಅವರಿದ್ದ ಬೇಯರ್ನ್ ತಂಡವು ಎರಡು ಚಾಂಪಿಯನ್ಸ್ ಲೀಗ್ಗಳು ಮತ್ತು 11 ಬುಂಡೆಸ್ಲಿಗ ಪ್ರಶಸ್ತಿಗಳನ್ನು ಗೆದ್ದಿದೆ.
ಅವರು ಆಡಿದ 124 ಪಂದ್ಯಗಳ ಪೈಕಿ 81 ಪಂದ್ಯಗಳಲ್ಲಿ ಜರ್ಮನಿ ಜಯ ಗಳಿಸಿದೆ.







