IPL 2026 | "ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿ": ವೈಭವ್ ಸೂರ್ಯವಂಶಿ ಆಟಕ್ಕೆ ಪಾಕ್ ಕ್ರಿಕೆಟ್ ವಿಶ್ಲೇಷಕರ ಮೆಚ್ಚುಗೆ

ವೈಭವ್ ಸೂರ್ಯವಂಶಿ | Photo Credit : PTI
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಕೇವಲ 15ನೇ ವಯಸ್ಸಿನಲ್ಲೇ ಅಬ್ಬರಿಸುತ್ತಿರುವ ಯುವ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದ ಗಮನ ಸೆಳೆಯುತ್ತಿದ್ದಾರೆ. ಋತುವಿನ ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ತಲೆನೋವಾಗಿರುವ ಅವರು, ಆರೆಂಜ್ ಕ್ಯಾಪ್ ಪೈಪೋಟಿಯಲ್ಲೂ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.
ವಿಶ್ವದ ಶ್ರೇಷ್ಠ ಬೌಲರ್ ಗಳ ವಿರುದ್ಧವೂ ನಿರ್ಭೀತಿಯಿಂದ ಸಿಕ್ಸರ್ಗಳನ್ನು ಬಾರಿಸುತ್ತಿರುವ ಸೂರ್ಯವಂಶಿಯ ಆಟ ಅಭಿಮಾನಿಗಳಲ್ಲಿ ಕುತೂಹಲ ಹಾಗೂ ಆಶ್ಚರ್ಯ ಹುಟ್ಟಿಸಿದೆ. ಅವರ ಆಟದ ವೈಭವ ಕಂಡು “ಇವರು ನಿಜವಾಗಿಯೂ ಮನುಷ್ಯರೇ?” ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕ್ರಿಕೆಟ್ ವಿಶ್ಲೇಷಕ ನೌಮಾನ್ ನಿಯಾಝ್ ಅವರು ತಮಾಷೆಯ ಧಾಟಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಈ ಹುಡುಗನ ಆಟವನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. WADA ಮಾದರಿಯಲ್ಲಿ ಅವನನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಬೇಕು ಅನಿಸುತ್ತದೆ. ಅವನಲ್ಲಿ ಏನೋ AI ಚಿಪ್ ಅಳವಡಿಸಿರಬಹುದು ಎನ್ನಿಸುವಷ್ಟು ಅವನು ಅಸಾಧಾರಣವಾಗಿ ಆಡುತ್ತಿದ್ದಾನೆ,” ಎಂದು ಅವರು ಹೇಳಿದ್ದಾರೆ.
ಸೂರ್ಯವಂಶಿಯ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನಾಡಿದ ಅವರು, “SRH ವಿರುದ್ಧ ಸ್ವಲ್ಪ ನಿಧಾನವಾಗಿ ಆಡಿದಂತೆ ಅನಿಸಿತು; 300 ಸ್ಟ್ರೈಕ್-ರೇಟ್ ಇರಬೇಕಿತ್ತು,” ಎಂದು ನಗುತ್ತಾ ಹೇಳಿದರು. ಹದಿಹರೆಯದ ವಯಸ್ಸಿನಲ್ಲಿ ದೇಹದ ವಿಕಾಸ, ಸ್ನಾಯುಗಳ ಬೆಳವಣಿಗೆ ಮತ್ತು ಹಾರ್ಮೋನ್ ಬದಲಾವಣೆಗಳಿಂದ ಮುಂದಿನ ವರ್ಷಗಳಲ್ಲಿ ಅವರ ಆಟ ಇನ್ನಷ್ಟು ಉನ್ನತ ಮಟ್ಟಕ್ಕೇರುತ್ತದೆ ಎಂಬ ವಿಶ್ವಾಸವನ್ನೂ ನೌಮಾನ್ ವ್ಯಕ್ತಪಡಿಸಿದರು.
ಸೂರ್ಯವಂಶಿಯ ಆಟದ ವೈಶಿಷ್ಟ್ಯಗಳನ್ನು ವಿವರಿಸಿದ ನೌಮಾನ್ ನಿಯಾಝ್, “ಅವರಲ್ಲಿ ತಂತ್ರಕ್ಕಿಂತ ಸಹಜ ಶಕ್ತಿ ಮತ್ತು ಸಮಯದ ಅಂದಾಜು ಮುಖ್ಯವಾಗಿದೆ. ಮಣಿಕಟ್ಟುಗಳ ಬಳಕೆ ಮತ್ತು ಬ್ಯಾಟ್ ಸ್ವಿಂಗ್ ಅವರ ಬಲವಾಗಿದೆ,” ಎಂದರು.
ಯುವ ಆಟಗಾರ ಬೆಳಕಿಗೆ ಬಂದದ್ದನ್ನು ವಿರಾಟ್ ಕೊಹ್ಲಿ ಅವರ ಕಾಲಘಟ್ಟದೊಂದಿಗೆ ಹೋಲಿಸಿ, “ಅವರು ಹುಟ್ಟಿದಾಗಲೇ ಕೊಹ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಈಗ ಸೂರ್ಯವಂಶಿಯಲ್ಲಿ ಕಾಣುತ್ತಿರುವ ಆತ್ಮವಿಶ್ವಾಸವೇ ಅವರನ್ನು ವಿಭಿನ್ನರನ್ನಾಗಿಸುತ್ತದೆ,” ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಐಪಿಎಲ್ 2026ರಲ್ಲಿ ಸೂರ್ಯವಂಶಿ 8 ಪಂದ್ಯಗಳಲ್ಲಿ 357 ರನ್ ಗಳಿಸಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಈ ಋತುವಿನಲ್ಲಿ ಅವರು ಈಗಾಗಲೇ ಶತಕ ಬಾರಿಸಿದ್ದು, 234ಕ್ಕಿಂತ ಹೆಚ್ಚು ಸ್ಟ್ರೈಕ್-ರೇಟ್ ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವುದು ಅವರ ಪ್ರಭಾವವನ್ನು ಮತ್ತಷ್ಟು ಬಲಪಡಿಸಿದೆ.






