ಅತಿವೇಗದ 1000 ರನ್: ಧೋನಿ ದಾಖಲೆ ಮುರಿದ ಗಿಲ್

Photo: x.com/lightningspeedk
ಲಕ್ನೋ: ಪ್ರವಾಸಿ ಅಫ್ಘಾನಿಸ್ತಾನ ತಂಡದ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ ನಾಯಕ ಶುಭಮನ್ ಗಿಲ್, ಏಕದಿನ ಪಂದ್ಯದಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ 1000 ರನ್ ಪೂರೈಸಿ, ಎಂ.ಎಸ್.ಧೋನಿ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದರು.
ಭಾರತದ ತಂಡದ ನಾಯಕ ನಾಲ್ಕಂಕಿಯ ಮೈಲುಗಲ್ಲನ್ನು ಕೇವಲ 954 ಎಸೆತಗಳಲ್ಲಿ ತಲುಪಿದ್ದಾರೆ. ಎಂ.ಎಸ್.ಧೋನಿ ಒಂದು ಎಸೆತ ಹೆಚ್ಚು ಅಂದರೆ 955 ಎಸೆತಗಳಲ್ಲಿ 1000 ರನ್ ಗಳಿಸಿದ್ದರು. ಸರ್ವಕಾಲಿಕ ಭಾರತೀಯರ ಪಟ್ಟಿಯಲ್ಲಿ ಗಿಲ್ ಮೂರನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ (857) ಹಾಗೂ ಕೇದಾರ್ ಜಾಧವ್ (936) ಎಸೆತಗಳಲ್ಲಿ 1000 ರನ್ ಗಳ ಗಡಿ ದಾಟಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.
ಬುಧವಾರದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್ ಗಳನ್ನು ಕೇವಲ 48 ರನ್ ಗಳಿಗೆಭಾರತ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಬಂದ ಗಿಲ್, ಇಶಾನ್ ಕಿಶನ್ ಜತೆ 224 ರನ್ ಗಳ ಭರ್ಜರಿ ಜತೆಯಾಟದಲ್ಲಿ ಭಾಗಿಯಾಗಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಗಿಲ್ ತಮ್ಮ 9ನೇ ಏಕದಿನ ಶತಕವನ್ನು ಕೇವಲ 77 ಎಸೆತಗಳಲ್ಲಿ ಪೂರೈಸಿದರು. 22 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 110 ಎಸೆತಗಳಲ್ಲಿ 154 ರನ್ ಗಳಿಸಿದರು.




