ಇತಿಹಾಸ ಸೃಷ್ಟಿಸಿದ ಗಿಲ್: ಐಪಿಎಲ್ ಪ್ಲೇಆಫ್ನಲ್ಲಿ ಅತಿವೇಗದ ಶತಕದ ಸಾಧನೆ

ಶುಭಮನ್ ಗಿಲ್ Photo : X/@IPL
ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ವಿರುದ್ಧ ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೇವಲ 53 ಎಸೆತಗಳಲ್ಲಿ 104 ರನ್ ಸಿಡಿಸಿದ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್, ಐಪಿಎಲ್ ಕ್ವಾಲಿಫೈಯರ್ ನಲ್ಲಿ ಅತಿವೇಗದ ಶತಕ ಗಳಿಸಿದ ಸಾಧನೆ ಮಾಡಿದರು.
ವೈಭವ್ ಸೂರ್ಯವಂಶಿ (96) ಹಾಗೂ ಕೊನೆಯ ಓವರ್ ನಲ್ಲಿ ಡೊನೊವನ್ ಫೆರೇರಾ ಪ್ರದರ್ಶಿಸಿದ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ 6 ವಿಕೆಟ್ ಗೆ 214 ರನ್ ಗಳಿಸಿದ ಸಂದರ್ಭದಲ್ಲಿ, ತೀವ್ರ ಒತ್ತಡದ ನಡುವೆ ಆರಂಭಿಕ ಆಟಗಾರನಾಗಿ ಮೈದಾನಕ್ಕೆ ಇಳಿದ ಗಿಲ್ ತಂಡವನ್ನು ಫೈನಲ್ ಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗಿಲ್ ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದರು. ಜತೆಗೆ ಗುಜರಾತ್ ಟೈಟನ್ ಪರ ಅತಿವೇಗದ ಶತಕ ಗಳಿಸಿದ ಆಟಗಾರರ ಪೈಕಿ ಎರಡನೇ ಸ್ಥಾನವನ್ನೂ ಗಿಲ್ ಪಡೆದರು. ಐಪಿಎಲ್ ಪ್ಲೇಆಫ್ ಹಂತದಲ್ಲಿ ಯಾವುದೇ ತಂಡದ ನಾಯಕ ಸಿಡಿಸಿದ ಮೊಟ್ಟಮೊದಲ ಶತಕ ಇದಾಗಿದೆ.
ಐಪಿಎಲ್ ಪ್ಲೇಆಫ್ ಹಂತದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ ಆಟಗಾರನಾಗಿಯೂ ಇತಿಹಾಸದಲ್ಲಿ ಗಿಲ್ ದಾಖಲಾದರು. ಇದು ಗಿಲ್ ಐಪಿಎಲ್ ನಲ್ಲಿ ಸಿಡಿಸಿದ ಐದನೇ ಶತಕವಾಗಿದೆ.
ಅದ್ಭುತ ಟೈಮಿಂಗ್ಮತ್ತು ನಿಯಂತ್ರಿತ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಗಿಲ್, ಜೋಫ್ರಾ ಆರ್ಚರ್ ಗೆ ವಿಕೆಟ್ ಒಪ್ಪಿಸುವ ಮುನ್ನ 15 ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಾಯಿ ಸುದರ್ಶನ್, ಪ್ಲೇಆಫ್ ಹಂತದ ಸುಧೀರ್ಘ ಜತೆಯಾಟದ ದಾಖಲೆಯನ್ನು ಹಂಚಿಕೊಂಡರು. ಇದಕ್ಕೂ ಮುನ್ನ ಮೈಕಲ್ ಹಸ್ಸೆ ಮತ್ತು ಮುರಳಿ ವಿಜಯ್ ಅವರು ಆರ್ಸಿಬಿ ವಿರುದ್ಧ 2011ರ ಐಪಿಎಲ್ ಫೈನಲ್ ನಲ್ಲಿ ನಿರ್ಮಿಸಿದ್ದ 159 ರನ್ ಗಳ ಜತೆಯಾಟದ ದಾಖಲೆಯನ್ನು ಗಿಲ್-ಸಾಯಿ ಜೋಡಿ ಮುರಿಯಿತು.






