ಚಾರಿಟಿಗಾಗಿ ನಡೆಸಿದ ಹರಾಜಿನಲ್ಲಿ ಗಿಲ್ ಜೆರ್ಸಿ 5.41 ಲಕ್ಷ ರೂ.ಗೆ ಮಾರಾಟ

ಶುಭಮನ ಗಿಲ್ | PC : PTI
ಲಂಡನ್, ಆ.9: ಇಂಗ್ಲೆಂಡ್ ತಂಡದ ವಿರುದ್ಧದ ‘ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ’ ಟೆಸ್ಟ್ ಕ್ರಿಕೆಟ್ ಸರಣಿಯ ಲಾರ್ಡ್ಸ್ ಪಂದ್ಯದ ವೇಳೆ ಟೀಮ ಇಂಡಿಯಾದ ನಾಯಕ ಶುಭಮನ ಗಿಲ್ ಧರಿಸಿದ್ದ ಜೆರ್ಸಿ 5.41 ಲಕ್ಷ ರೂ.ಗೆ ಮಾರಾಟವಾಗಿದೆ.
‘ರೆಡ್ ಫಾರ್ ರುತ್ ಚಾರಿಟಿ’ಗಾಗಿ ನಡೆಸಿದ ಹರಾಜಿನಲ್ಲಿ ಎರಡೂ ತಂಡಗಳ ಆಟಗಾರರು ಸಹಿ ಮಾಡಿದ ಶರ್ಟ್ ಗಳು, ಕ್ಯಾಪ್ಗಳು, ಬ್ಯಾಟ್ಗಳು, ಭಾವಚಿತ್ರಗಳು, ಟಿಕೆಟ್ಗಳು ಸೇರಿದಂತೆ ಹಲವು ವಸ್ತುಗಳ ಪೈಕಿ ಇದು ಅತ್ಯಂತ ದುಬಾರಿ ಎನಿಸಿದೆ.
ಹರಾಜಿನಲ್ಲಿ ಭಾರತದ ಆಟಗಾರರ ವಸ್ತುಗಳೇ ಅತ್ಯಂತ ಹೆಚ್ಚು ಬೆಲೆ ಪಡೆದುಕೊಂಡಿರುವುದು ವಿಶೇಷ.
ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜ ಅವರ ಜೆರ್ಸಿಗಳು ತಲಾ 4.94 ಲಕ್ಷ ರೂ.ಗೆ ಮಾರಾಟವಾಗಿದೆ. ಉಳಿದಂತೆ ನಾಯಕ ಬೆನ್ ಸ್ಟೋಕ್ಸ್ ಜೆರ್ಸಿ 4 ಲಕ್ಷ ರೂ. ಗಳಿಸಿದೆ.
ಜೋ ರೂಟ್ ಸಹಿ ಹಾಕಿರುವ ಕ್ಯಾಪ್ ಬರೋಬ್ಬರಿ 3.52 ಲಕ್ಷ ರೂ.ಗೆ ಮಾರಾಟವಾಗಿದೆ. ರಿಷಭ್ ಪಂತ್ ಅವರ ಕ್ಯಾಪ್ 1.76 ಲಕ್ಷ ರೂ.ಗೆ ಹರಾಜಾಗಿದೆ.
‘ರೆಡ್ ಫಾರ್ ರುಥ್’ ಎಂಬುದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಂಡ್ರೊ ಸ್ಟ್ರಾಸ್ ಸ್ಥಾಪಿಸಿರುವ ಫೌಂಡೇಶನ್ ಆಗಿದೆ. ಕ್ಯಾನ್ಸರ್ ನಿಂದ ಮೃತಪಟ್ಟ ತನ್ನ ಪತ್ನಿ ರುಥ್ ಸ್ಟ್ರಾಸ್ ಅವರ ಸ್ಮರಣಾರ್ಥ ಫೌಂಡೇಶನ್ ವತಿಯಿಂದ ಪ್ರತೀವರ್ಷ ಲಾರ್ಡ್ಸ್ ನಲ್ಲಿ ಹರಾಜು ನಡೆಸಲಾಗುತ್ತಿದೆ.
ಹರಾಜಿನಿಂದ ಬಂದ ಹಣವನ್ನು ಕ್ಯಾನ್ಸರ್ ಜಾಗೃತಿ ಹಾಗೂ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಸುಮಾರು 3,500 ಕುಟುಂಬಗಳಿಗೆ ನೆರವು ನೀಡಿರುವುದಾಗಿ, ಸಾವಿರಕ್ಕೂ ಹೆಚ್ಚು ವೃತ್ತಿಪರರಿಗೆ ತರಬೇತಿ ನೀಡಿರುವುದಾಗಿ ಫೌಂಡೇಶನ್ ತಿಳಿಸಿದೆ.







