2026ರ ಐಪಿಎಲ್ ಹರಾಜಿನಿಂದ ಹೊರಗುಳಿದ ಗ್ಲೆನ್ ಮ್ಯಾಕ್ಸ್ವೆಲ್!

ಗ್ಲೆನ್ ಮ್ಯಾಕ್ಸ್ವೆಲ್ | Photo Credit : PTI
ಹೊಸದಿಲ್ಲಿ, ಡಿ.2: ಆಸ್ಟ್ರೇಲಿಯದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ 2026ರ ಆವೃತ್ತಿಯ ಐಪಿಎಲ್ ಟೂರ್ನಿಯ ಹರಾಜಿನ ಪಟ್ಟಿಯಲ್ಲಿ ತನ್ನ ಹೆಸರು ಇರುವುದಿಲ್ಲ ಎಂದು ಮಂಗಳವಾರ ಪ್ರಕಟಿಸಿದ್ದಾರೆ. ಈ ಮೂಲಕ ಅವರು ಅತ್ಯಂತ ಶ್ರೀಮಂತ ಟಿ20 ಲೀಗ್ನೊಂದಿಗೆ ತನ್ನ ನಂಟನ್ನು ತಾತ್ಕಾಲಿಕವಾಗಿ ಕಡಿದುಕೊಂಡಿದ್ದಾರೆ.
ಮ್ಯಾಕ್ಸ್ವೆಲ್ 2025ರ ಐಪಿಎಲ್ ಹರಾಜಿನಲ್ಲಿ 4.2 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದರು. ಆದರೆ ಅವರು ಬೆರಳುನೋವಿನಿಂದಾಗಿ ಪಂದ್ಯಾವಳಿಯನ್ನು ಅರ್ಧದಲ್ಲೇ ಮೊಟಕುಗೊಳಿಸುವ ಮೊದಲು 9 ಪಂದ್ಯಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದರು. ಕೇವಲ 78 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
2012ರಲ್ಲಿ ಐಪಿಎಲ್ಗೆ ಕಾಲಿಟ್ಟ ನಂತರ ಮ್ಯಾಕ್ಸ್ವೆಲ್ ವಿದೇಶದ ಸ್ಫೋಟಕ ಶೈಲಿಯ ಬ್ಯಾಟರ್ ಗಳ ಪೈಕಿ ಒಬ್ಬರಾಗಿದ್ದರು. 2014ರಲ್ಲಿ ಒಟ್ಟು 542 ರನ್ ಗಳಿಸಿ ಮಿಂಚಿದ್ದರು. ಅ ನಂತರ 2017(310 ರನ್), 2021(513 ರನ್), 2022(301 ರನ್)ಹಾಗೂ 2023(400)ಆವೃತ್ತಿಯ ಐಪಿಎಲ್ನಲ್ಲಿ ಆರ್ಭಟಿಸಿದ್ದರು.
‘‘ಐಪಿಎಲ್ನಲ್ಲಿ ಹಲವಾರು ಮರೆಯಲಾರದ ಋತುಗಳ ನಂತರ ಈ ವರ್ಷದ ಐಪಿಎಲ್ ಹರಾಜಿನಲ್ಲಿ ನನ್ನ ಹೆಸರನ್ನು ಹಾಕದಿರಲು ನಿರ್ಧರಿಸಿದ್ದೇನೆ. ಇದೊಂದು ಪ್ರಮುಖ ನಿರ್ಧಾರ. ಈ ಲೀಗ್ ನನಗೆ ನೀಡಿರುವ ಅವಕಾಶಕ್ಕಾಗಿ ಆಭಾರಿಯಾಗಿರುವೆ. ಕ್ರಿಕೆಟಿಗ ಹಾಗೂ ವ್ಯಕ್ತಿಯಾಗಿ ರೂಪುಗೊಳ್ಳಲು ಐಪಿಎಲ್ ನನಗೆ ನೆರವಾಗಿದೆ. ವಿಶ್ವ ದರ್ಜೆಯ ಸಹ ಆಟಗಾರರೊಂದಿಗೆ ಆಡುವ, ಉತ್ತಮ ಫ್ರಾಂಚೈಸಿಗಳನ್ನು ಪ್ರತಿನಿಧಿಸುವ ಅದೃಷ್ಟ ನನಗೆ ಲಭಿಸಿತ್ತು. ಇಷ್ಟು ವರ್ಷಗಳ ಕಾಲ ನನಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಮತ್ತೊಮ್ಮೆ ನಿಮ್ಮನ್ನು ನೋಡುವ ವಿಶ್ವಾಸದಲ್ಲಿದ್ದೇನೆ’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಮ್ಯಾಕ್ಸ್ವೆಲ್ ಬರೆದಿದ್ದಾರೆ.







