GOAT TOUR | ಮೆಸ್ಸಿ ದಿಲ್ಲಿ ಭೇಟಿ ಇಂದು: ಪ್ರಧಾನಿ ಮೋದಿಯ ಭೇಟಿ ನಿರೀಕ್ಷೆ

ಲಯೊನೆಲ್ ಮೆಸ್ಸಿ | Photo Credit : PTI
ಹೊಸದಿಲ್ಲಿ: ಮೂರು ದಿನಗಳ ಭಾರತ ಭೇಟಿಗೆ ಆಗಮಿಸಿರುವ ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಸೋಮವಾರ ರಾಷ್ಟ್ರ ರಾಜಧಾನಿಗೆ ಆಗಮಿಸಲಿದ್ದು, ಅರುಣ್ ಜೇಟ್ಲೆ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆಗೆ ದಿಲ್ಲಿ ಪೊಲೀಸರು ಸೂಚಿಸಿದ್ದಾರೆ.
ಪ್ರವಾಸದ ಅಂತಿಮ ಹಂತವಾಗಿ ರಾಜಧಾನಿಗೆ ಆಗಮಿಸಲಿರುವ ಮೆಸ್ಸಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ. ಮೆಸ್ಸಿ ಭೇಟಿ ಹಿನ್ನೆಲೆಯಲ್ಲಿ ಬಹದ್ದೂರ್ ಶಾ ಜಾಫರ್ ಮಾರ್ಗ ಮತ್ತು ಜೆಎಲ್ಎನ್ ಮಾರ್ಗದಲ್ಲಿ ಸಂಚಾರ ಬದಲಾವಣೆ ಮಾಡಲಾಗುವುದು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.
ದರಿಯಾಗಂಜ್ನಿಂದ ಬಹದ್ದೂರ್ ಶಾ ಜಾಫರ್ ಮಾರ್ಗದವರೆಗೆ ಯಾವುದೇ ಘನ ವಾಹನಗಳು ಸಂಚರಿಸುವಂತಿಲ್ಲ. ಅಂತೆಯೇ ಗುರುನಾನಕ್ ಚೌಕ್ ನಿಂದ ಅಸಫ್ ಅಲಿ ರಸ್ತೆವರೆಗೂ ಘನ ವಾಹನಗಳು ಪ್ರವೇಶಿಸುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫಿರೋಜ್ ಶಾ ಕೋಟ್ಲಾದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡಿ.15ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 4ರವರೆಗೆ ’ಲಿಯೊನೆಲ್ ಮೆಸ್ಸಿ ಗೋಟ್ ಇಂಡಿಯಾ ಟೂರ್-ದಿಲ್ಲಿ ಲೆಗ್’ ಅಂಗವಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆ ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.
ದಿಲ್ಲಿ ಪ್ರವಾಸದ ಮುಖ್ಯ ಕಾರ್ಯಕ್ರಮ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೂರು ಯುವ ಟ್ರೋಫಿಗಳನ್ನು ಗೆದ್ದಿರುವ ಮಿನರ್ವ ಅಕಾಡಮಿ ತಂಡವನ್ನು ಮೆಸ್ಸಿ ಅಭಿನಂದಿಸಲಿದ್ದಾರೆ. ಫುಟ್ಬಾಲ್ ಐಕಾನ್ ಮೆಸ್ಸಿಯವರನ್ನು ನೋಡಲು ಟಿಕೆಟ್ ಗಳನ್ನು ಖರೀದಿಸಿರುವ ಅಭಿಮಾನಿಗಳ ಪ್ರವೇಶ ಮತ್ತು ನಿರ್ಗಮನ ಮಾರ್ಗದ ಬಗ್ಗೆಯೂ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಟೇಡಿಯಂ ಸುತ್ತಮುತ್ತ ವಾಹನಗಳ ನಿಲುಗಡೆಯನ್ನೂ ನಿಷೇಧಿಸಲಾಗಿದ್ದು, ನಿಲುಗಡೆ ಮಾಡಿದ ವಾಹನಗಳನ್ನು ಒಯ್ಯುವುದು ಮತ್ತು ದಂಡ ವಿಧಿಸುವ ಕ್ರಮಕ್ಕೂ ಮುಂದಾಗಿದೆ. ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಮೆಟ್ರೋ ಮತ್ತು ಬಸ್ ಸೇವೆ ಬಳಸಿಕೊಳ್ಳುವಂತೆ ಸಲಹೆ ಮಾಡಲಾಗಿದೆ.







