ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡ ಪಾಲ್ಗೊಳ್ಳುವಿಕೆ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ: ಪಿಸಿಬಿ

PC : timesofindia
ಲಾಹೋರ್, ಜ. 24: ಮುಂಬರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನಿ ಕ್ರಿಕೆಟ್ ತಂಡವು ಭಾಗವಹಿಸುವುದೇ ಇಲ್ಲವೇ ಎನ್ನುವುದಕ್ಕೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ಪಾಕಿಸ್ತಾನ ಸರಕಾರವು ತೆಗೆದುಕೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಮುಹ್ಸಿನ್ ನಖ್ವಿ ಶನಿವಾರ ಹೇಳಿದ್ದಾರೆ.
ಪಂದ್ಯಾವಳಿಯಿಂದ ಬಾಂಗ್ಲಾದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಬೆಂಬಲ ಸೂಚಿಸಿ ತಾನು ಕೂಡ ಹಿಂದೆ ಸರಿಯಬೇಕೇ ಎಂಬ ಬಗ್ಗೆ ಪಾಕಿಸ್ತಾನ ಚಿಂತಿಸುತ್ತಿದೆ.
ಲಾಹೋರ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಖ್ವಿ, ಈಗ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಶಹಬಾಝ್ ಶರೀಫ್ ಮರಳಿದ ಬಳಿಕ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
‘‘ಟಿ20 ವಿಶ್ವಕಪ್ನಲ್ಲಿ ನಾವು ಆಡುತ್ತೇವೆಯೋ ಇಲ್ಲವೋ ಎನ್ನುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಲಿದೆ. ನಮ್ಮ ಪ್ರಧಾನಿ ಈಗ ದೇಶದ ಹೊರಗಿದ್ದಾರೆ. ಅವರು ಮರಳಿದಾಗ ನಾವು ಅವರಿಂದ ಸಲಹೆ ತೆಗೆದುಕೊಳ್ಳುತ್ತೇವೆ. ಸರಕಾರದ ನಿರ್ಧಾರವು ಅಂತಿಮವಾಗಿರುತ್ತದೆ. ಆಡುವುದು ಬೇಡ ಎಂದು ಅವರು ಹೇಳಿದರೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಇತರ ಯಾವುದೇ ತಂಡವನ್ನು ಆಹ್ವಾನಿಸಬಹುದು’’ ಎಂದು ನಖ್ವಿ ಹೇಳಿದರು.
ಭದ್ರತಾ ಬೆದರಿಕೆ ಇದೆ ಎಂಬ ಕಾರಣ ನೀಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ನಿರಾಕರಿಸಿದ ಬಳಿಕ ಅದು ಕೂಟದಿಂದ ಹೊರಬಿದ್ದಿದೆ. ಐಸಿಸಿಯು ಅದರ ಸ್ಥಾನಕ್ಕೆ ಸ್ಕಾಟ್ಲ್ಯಾಂಡ್ ತಂಡವನ್ನು ಕರೆ ತಂದಿದೆ.
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಫೆಬ್ರವರಿ 7ರಂದು ಆರಂಭಗೊಳ್ಳಲಿದೆ. ಪಾಕಿಸ್ತಾನವು ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.







