Japan | ನಗೋಯಾದಲ್ಲಿ ಏಶ್ಯನ್ ಗೇಮ್ಸ್ ಗೆ ಅದ್ದೂರಿ ಚಾಲನೆ

Photo Credit : PTI
ಟೋಕಿಯೊ, ಸೆ. 19: ಮಿಝುಹೋ ಪಾರ್ಕ್ ಅತ್ಲೆಟಿಕ್ಸ್ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಉದ್ಘಾಟನಾ ಸಮಾರಂಭದೊಂದಿಗೆ 20ನೇ ಆವೃತ್ತಿಯ ಏಶ್ಯನ್ ಕ್ರೀಡಾಕೂಟವು ಶನಿವಾರ ನಗೋಯಾದಲ್ಲಿ ಅಧಿಕೃತವಾಗಿ ಆರಂಭವಾಯಿತು.
ರಾಣಿ ಮಸಾಕೊ, ಜಪಾನಿನ ರಾಜಮನೆತನದ ಸದಸ್ಯರು, ಏಶ್ಯ ಒಲಿಂಪಿಕ್ಸ್ ಕೌನ್ಸಿಲ್ ಅಧ್ಯಕ್ಷ ಶೇಖ್ ಜೋವಾನ್ ಬಿನ್ ಹಮದ್ ಅಲ್ ಥಾನಿ ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷೆ ಕಿರ್ಸ್ಟಿ ಕೊವೆಂಟ್ರಿ ಅವರ ಸಮ್ಮುಖದಲ್ಲಿ ಜಪಾನ್ನ ರಾಜ ನರುಹಿಟೊ ಅವರು ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಜಪಾನಿನ ರಾಷ್ಟ್ರಗೀತೆಯೊಂದಿಗೆ ಸಮಾರಂಭದ ಆರಂಭ: ಎರಡು ಗಂಟೆಗಳ ಕಾಲ ನಡೆದ ಈ ಸಮಾರಂಭವು ಜಪಾನ್ನ ರಾಷ್ಟ್ರಗೀತೆಯೊಂದಿಗೆ ಆರಂಭವಾಯಿತು. ಬಳಿಕ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.
ಧ್ವಜಾರೋಹಣಕ್ಕೂ ಮೊದಲು ಒಂಬತ್ತು ಸದಸ್ಯರ ಜಪಾನ್ನ ಸ್ವಯಂರಕ್ಷಣಾ ಪಡೆಗಳು ಧ್ವಜವನ್ನು ವೇದಿಕೆಗೆ ತಂದರು. ಬಳಿಕ ಕ್ರೀಡಾಂಗಣದಲ್ಲಿ ಕತ್ತಲೆ ಆವರಿಸಿದ್ದು, ಜಪಾನಿನ ರಾಷ್ಟ್ರಧ್ವಜದ ಮೇಲೆ ಮಾತ್ರ ವಿಶೇಷ ಬೆಳಕನ್ನು ಚೆಲ್ಲಲಾಯಿತು.
ಸಮಾರಂಭದ ಬಳಿಕ ಕ್ರೀಡಾಪಟುಗಳ ಪರೇಡ್ ನಡೆಯಿತು. ಇದರಲ್ಲಿ 45 ರಾಷ್ಟ್ರಗಳ ತಂಡಗಳು ಹಾಗೂ OCA ನಿರಾಶ್ರಿತರ ತಂಡ ಭಾಗವಹಿಸಿದ್ದವು.
ಅಫ್ಘಾನಿಸ್ತಾನವು ಪರೇಡ್ಗೆ ಪ್ರವೇಶಿಸಿದ ಮೊದಲ ತಂಡವಾಗಿದ್ದರೆ, ಏಶ್ಯದ ಪ್ರಮುಖ ಕ್ರೀಡಾ ಶಕ್ತಿಗಳಲ್ಲಿ ಒಂದಾಗಿರುವ ಚೀನಾ 800ಕ್ಕೂ ಅಧಿಕ ಕ್ರೀಡಾಪಟುಗಳ ತಂಡದೊಂದಿಗೆ ಎಲ್ಲರ ಗಮನ ಸೆಳೆಯಿತು.
ಏಶ್ಯನ್ ಕ್ರೀಡಾಕೂಟದಲ್ಲಿ 469 ಚಿನ್ನದ ಪದಕಕ್ಕಾಗಿ ಸ್ಪರ್ಧೆ
ನಗೋಯಾ ನಗರದ ಮಿಝುಹೋ ಪಾರ್ಕ್ ಅತ್ಲೆಟಿಕ್ಸ್ ಸ್ಟೇಡಿಯಂ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಿಗೆ ಆತಿಥ್ಯವಹಿಸಲಿದೆ. ಈ ಖಂಡಾಂತರ ಕ್ರೀಡಾಕೂಟದಲ್ಲಿ 45 ದೇಶಗಳು ಹಾಗೂ OCA ನಿರಾಶ್ರಿತರ ತಂಡದ ಸುಮಾರು 11,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ 469 ಚಿನ್ನದ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ.
ಭಾರತದ ನೇತೃತ್ವ ವಹಿಸಿದ ಮನು ಭಾಕರ್, ಪವನ್ ಸೆಹ್ರಾವತ್
ಪರೇಡ್ ವೇಳೆ ಭಾರತೀಯ ತಂಡದ ನೇತೃತ್ವವನ್ನು ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಹಾಗೂ 2022ರ ಏಶ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ವಹಿಸಿದರು.
ಸಾಂಪ್ರದಾಯಿಕ ನೇವಿ ಬ್ಲೂ (ಗಾಢ ನೀಲಿ) ಬಣ್ಣದ ಉಡುಪನ್ನು ಧರಿಸಿದ್ದ ಈ ಜೋಡಿಯು ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಿಡಿದು ಸಾಗಿತು.
ಶಾಟ್ಪುಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಅವರಿಗೆ ಸಮಾರಂಭದ ವಿಶೇಷ ಉಡುಪು ಸರಿಯಾದ ಸಮಯಕ್ಕೆ ಸಿಗದ ಕಾರಣ ಉದ್ಘಾಟನಾ ಸಮಾರಂಭದ ಧ್ವಜಧಾರಿಯಾಗಿ ಭಾಗವಹಿಸಲಿಲ್ಲ. ತೂರ್ ಬದಲಿಗೆ ಪವನ್ ಸೆಹ್ರಾವತ್ ಭಾರತದ ಧ್ವಜಧಾರಿಯಾಗಿ ಪಾಲ್ಗೊಂಡರು.
ಭಾರತವು ಏಶ್ಯನ್ ಕ್ರೀಡಾಕೂಟಕ್ಕೆ 501 ಸದಸ್ಯರ ತಂಡವನ್ನು ಕಳುಹಿಸಿದೆ. 2023ರ ಹಾಂಗ್ಝೌ ಏಶ್ಯನ್ ಕ್ರೀಡಾಕೂಟದಲ್ಲಿ ದಾಖಲಿಸಿದ ತನ್ನ ಅತ್ಯುತ್ತಮ ಪ್ರದರ್ಶನವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವತ್ತ ಭಾರತ ಗಮನ ಹರಿಸಲಿದೆ. ಹಿಂದಿನ ಕ್ರೀಡಾಕೂಟದಲ್ಲಿ ಭಾರತವು 28 ಚಿನ್ನದ ಪದಕಗಳ ಸಹಿತ ಒಟ್ಟು 104 ಪದಕಗಳನ್ನು ಗೆದ್ದಿದೆ. ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.
ಉದ್ಘಾಟನಾ ಸಮಾರಂಭದ ಒಂದು ವಾರದ ಮೊದಲೇ ಕೆಲವು ಕ್ರೀಡಾ ಸ್ಪರ್ಧೆಗಳು ಆರಂಭಗೊಂಡಿವೆ. ಬಾಸ್ಕೆಟ್ಬಾಲ್ ಸೆ. 10ರಂದೇ ಆರಂಭವಾಗಿತ್ತು. ಫುಟ್ಬಾಲ್ ಕೂಡ ಸಮಾರಂಭಕ್ಕೂ ಮೊದಲೇ ಶುರುವಾಗಿದೆ. ಭಾರತದ ಮಹಿಳೆಯರ ಕ್ರಿಕೆಟ್ ತಂಡವು ಶುಕ್ರವಾರ ನಡೆದ ಪಂದ್ಯದಲ್ಲಿ ಆತಿಥೇಯ ಜಪಾನ್ ತಂಡವನ್ನು ಎಂಟು ವಿಕೆಟ್ಗಳಿಂದ ಮಣಿಸಿ ಸೆಮಿಫೈನಲ್ಗೆ ತಲುಪಿದೆ.
ಏಶ್ಯನ್ ಕ್ರೀಡಾಕೂಟಕ್ಕೆ ಇದೇ ಮೊದಲ ಬಾರಿ ಸೇರ್ಪಡೆಗೊಂಡಿರುವ ಟೆಕ್ಬಾಲ್ ಕ್ರೀಡೆಯಲ್ಲೂ ಭಾರತ ತಂಡ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಕ್ವಿಮ್ಸಿ ಡಿಸೋಜಾ ಸೋಲನುಭವಿಸಿದರೂ, ಅವರು ರವಿವಾರ ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.






