ಗ್ರ್ಯಾಂಡ್ಸ್ಲಾಮ್ ಜೆರುಸಲೆಮ್ ಟೂರ್ನಮೆಂಟ್| ರಾಷ್ಟ್ರೀಯ ದಾಖಲೆ ಮುರಿದ ಭಾರತದ ಅತ್ಲೀಟ್ ಅಂಕಿತಾ ಧ್ಯಾನಿ

ಅಂಕಿತಾ ಧ್ಯಾನಿ | PC : olympics.com
ಹೊಸದಿಲ್ಲಿ, ಆ.15: ವಿಶ್ವ ಅತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಸಿಲ್ವರ್ ಈವೆಂಟ್ ಆಗಿರುವ ಗ್ರ್ಯಾಂಡ್ಸ್ಲಾಮ್ ಜೆರುಸಲೆಮ್ ಟೂರ್ನಮೆಂಟ್ನಲ್ಲಿ ಗುರುವಾರ ಭಾರತದ ಅತ್ಲೀಟ್ ಅಂಕಿತಾ ಧ್ಯಾನಿ ಅವರು ಮಹಿಳೆಯರ 2,000 ಮೀಟರ್ ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದರು.
23ರ ಹರೆಯದ ಅಂಕಿತಾ ಧ್ಯಾನಿ 6:13.92 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಇಸ್ರೇಲ್ನ ಅಡ್ವಾ ಕೊಹೆನ್(6:15.20)ಹಾಗೂ ಡೆನ್ಮಾರ್ಕ್ನ ಜುಲಿಯನ್ (6:17.80)ಅವರು ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಈ ಮೊದಲು ಏಶ್ಯನ್ ಗೇಮ್ಸ್ ಚಾಂಪಿಯನ್ ಪಾರುಲ್ ಚೌಧರಿ(6:14.38)ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ಅಂಕಿತಾ ಕಳೆದ ತಿಂಗಳು ಜರ್ಮನಿಯಲ್ಲಿ ನಡೆದಿದ್ದ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ನಲ್ಲಿ ಮಹಿಳೆಯರ 3,000 ಮೀ. ಸ್ಟೀಪಲ್ಚೇಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಈ ವರ್ಷ ದಕ್ಷಿಣ ಕೊರಿಯದಲ್ಲಿ ನಡೆದಿದ್ದ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಉತ್ತರಾಖಂಡದ ಅತ್ಲೀಟ್ ಅಂಕಿತಾ ಅವರು ಮಹಿಳೆಯರ 3,000 ಮೀ. ಸ್ಟೀಪಲ್ಚೇಸ್ನಲ್ಲಿ 5ನೇ ಸ್ಥಾನ ಪಡೆದಿದ್ದರು. ಪಾರುಲ್ ಚೌಧರಿ ಬೆಳ್ಳಿ ಪದಕ ಜಯಿಸಿದ್ದರು. 2023ರ ಆವೃತ್ತಿಯ ಟೂರ್ನಿಯಲ್ಲಿ ಅಂಕಿತಾ ಅವರು ಮಹಿಳೆಯರ 5,000 ಮೀ. ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.







