ನಾಳೆ ಡಬ್ಲ್ಯುಪಿಎಲ್ ಪಂದ್ಯಾವಳಿಗೆ ಚಾಲನೆ | ಮೊದಲ ಪಂದ್ಯದಲ್ಲಿ ಆರ್ಸಿಬಿ-ಗುಜರಾತ್ ಜೈಂಟ್ಸ್ ಹಣಾಹಣಿ

Photo - PTI
ಬೆಂಗಳೂರು: ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2025ರ ಋತು ಶುಕ್ರವಾರ ಆರಂಭವಾಗಲಿದೆ. ಡಬ್ಲ್ಯುಪಿಎಲ್ ಟಿ20 ಪಂದ್ಯಾವಳಿಯು ವಡೋದರ, ಬೆಂಗಳೂರು, ಮುಂಬೈ ಮತ್ತು ಲಕ್ನೋ- ಈ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಒಟ್ಟು 5 ತಂಡಗಳು- ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜಯಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್- ಭಾಗವಹಿಸುತ್ತಿವೆ.
ಈ ಬಾರಿಯ ಹರಾಜು ಪ್ರಕ್ರಿಯೆಯು ಡಿ.15ರಂದು ಬೆಂಗಳೂರಿನಲ್ಲಿ ನಡೆದಿದ್ದು, ಅಗ್ರಮಾನ್ಯ ಅಂತರ್ರಾಷ್ಟ್ರೀಯ ತಾರೆಯರು ಮತ್ತು ದೇಶೀ ಪ್ರತಿಭೆಗಳ ಸಹಿತ ಒಟ್ಟು 120 ಆಟಗಾರ್ತಿಯರು ಹರಾಜಿನ ಕಣದಲ್ಲಿದ್ದರು.
ಪಂದ್ಯಾವಳಿಯ ಮೊದಲ ಪಂದ್ಯವು ಸ್ಮತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಆ್ಯಶ್ಲೇ ಗಾರ್ಡ್ನರ್ ನೇತೃತ್ವದ ಗುಜರಾತ್ ಜಯಂಟ್ಸ್ ತಂಡಗಳ ನಡುವೆ ವಡೋದರದಲ್ಲಿ ನಡೆಯಲಿದೆ.
► ಆಲ್ರೌಂಡರ್ ಸಿಮ್ರಾನ್ ಶೇಕ್ ದುಬಾರಿ ಆಟಗಾರ್ತಿ
ಡಿ.15ರಂದು ಬೆಂಗಳೂರಿನಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಪ್ರಕ್ರಿಯೆಯಲ್ಲಿ 19 ಆಟಗಾರ್ತಿಯರನ್ನು ವಿವಿಧ ತಂಡಗಳು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದವು.
ಮುಂಬೈ ಆಲ್ರೌಂಡರ್ ಸಿಮ್ರಾನ್ ಶೇಕ್ 1.90 ಕೋಟಿ ರೂ.ಗೆ ಗುಜರಾತ್ ಜಯಂಟ್ಸ್ ಪಾಲಾದರು. ವೆಸ್ಟ್ ಇಂಡೀಸ್ನ ಡಿಯಾಂಡ್ರಾ ಡೊಟಿನ್ ಗುಜರಾತ್ ಜಯಂಟ್ಸ್ ತಂಡಕ್ಕೆ 1.70 ಕೋಟಿ ರೂ.ಗೆ ಹರಾಜಾದರು. ವಿಕೆಟ್ಕೀಪರ್ ಜಿ. ಕಮಲಿನಿ 1.60 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಪಾಲಾದರು.
ಪ್ರೇಮಾ ರಾವತ್ ಆರ್ಸಿಬಿಗೆ 1.20 ಕೋಟಿ ರೂ. ಹಾಗೂ ಎನ್. ಚರಣಿ ಡೆಲ್ಲಿ ಕ್ಯಾಪಿಟಲ್ಸ್ ಗೆ 55 ಲಕ್ಷ ರೂ. ಗೆ ಹರಾಜಾದರು.
ಸಿಮ್ರಾನ್, ಡೊಟಿನ್, ಕಮಲಿನಿ, ಪ್ರೇಮಾ ಮತ್ತು ಚರಣಿ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಟಾಪ್-5 ಆಟಗಾರ್ತಿಯರಾಗಿದ್ದು, ಸ್ನೇಹ್ ರಾಣಾ, ಹೆದರ್ ನೈಟ್, ಲಾರೆನ್ ಬೆಲ್, ಲಾರಾ ಹ್ಯಾರಿಸ್ ಹರಾಜಾಗದೆ ಉಳಿದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.
► ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿದ್ದ ಮುಂಬೈ ಇಂಡಿಯನ್ಸ್
2023ರಲ್ಲಿ ನಡೆದ ಆರಂಭಿಕ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 132 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, 7 ವಿಕೆಟ್ ಗಳ ಜಯ ಗಳಿಸಿತ್ತು. ಆ ಮೂಲಕ ಚೊಚ್ಚಲ ಡಬ್ಲ್ಯುಪಿಐ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
2024ರಲ್ಲಿ, ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ, ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಆರ್ಸಿಬಿ ಫೈನಲ್ ಪ್ರವೇಶಿಸಿತ್ತು. ಆ ಮೂಲಕ ಮುಂಬೈ ಇಂಡಿಯನ್ಸ್ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶ ತಪ್ಪಿತ್ತು. ಫೈನಲ್ನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಆರ್ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ ಪ್ರಶಸ್ತಿಯನ್ನು ಈ ಬಾರಿ ಆರ್ಸಿಬಿ ಉಳಿಸಿಕೊಳ್ಳುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ನಾಳೆಯ ಪಂದ್ಯ ಆರಂಭ: ಸಂಜೆ 7:30







