ನಿಧಾನಗತಿಯ ಬೌಲಿಂಗ್| ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ಗೆ 12 ಲಕ್ಷ ರೂ.ದಂಡ

Photo Credit : PTI
ಹೊಸದಿಲ್ಲಿ,ಎ.9: ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಐಪಿಎಲ್ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವುದಕ್ಕೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಗುಜರಾತ್ ತಂಡವು ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಒಂದು ರನ್ನಿಂದ ರೋಚಕ ಜಯ ದಾಖಲಿಸಿತ್ತು. ಈ ಮೂಲಕ ಈ ವರ್ಷದ ಐಪಿಎಲ್ನಲ್ಲಿ ಮೊದಲ ಗೆಲುವು ಪಡೆದಿತ್ತು.
ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಟಾಟಾ ಐಪಿಎಲ್ ಟೂರ್ನಿಯ 14ನೇ ಪಂದ್ಯದ ವೇಳೆ ಗುಜರಾತ್ ಟೈಟಾನ್ಸ್ ತಂಡವು ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ನಂತರ ಆ ತಂಡದ ನಾಯಕ ಶುಭಮನ್ ಗಿಲ್ಗೆ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ 2.22ರ ಅಡಿಯಲ್ಲಿ ಈ ವರ್ಷ ಗುಜರಾತ್ ತಂಡ ಎಸಗಿರುವ ಮೊದಲ ತಪ್ಪು ಇದಾಗಿದೆ. ಹೀಗಾಗಿ ಗಿಲ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಾಧ್ಯಮ ಸಲಹೆಗಾರ ಹೇಳಿದ್ದಾರೆ.
ಗೆಲ್ಲಲು 210 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಕೇವಲ ಒಂದು ರನ್ ಅಂತರದಿಂದ ಸೋಲನುಭವಿಸಿತು.
ಗುಜರಾತ್ ಟೈಟಾನ್ಸ್ ತಂಡವು ಲಕ್ನೊದಲ್ಲಿ ರವಿವಾರ ನಡೆಯಲಿರುವ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಎದುರಿಸಲಿದೆ. ಶನಿವಾರ ಚೆನ್ನೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಖಾಮುಖಿಯಾಗಲಿದೆ.





