ಪ್ಲೇಆಫ್ಗೆ ಲಗ್ಗೆಯಿಟ್ಟ ಗುಜರಾತ್ ಟೈಟನ್ಸ್ : ಉಳಿದ ಮೂರು ಸ್ಥಾನಕ್ಕೆ ಪೈಪೋಟಿ

Photo: x.com/aajtak
ಹೊಸದಿಲ್ಲಿ: ಗುಜರಾತ್ ಟೈಟನ್ಸ್ ತಂಡ ಮಂಗಳವಾರ ಅಹ್ಮದಾಬಾದ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 12 ಪಂದ್ಯಗಳಲ್ಲಿ 16 ಅಂಕ ಕಲೆಹಾಕಿರುವ ಜಿಟಿ ಪ್ರಸಕ್ತ ಋತುವಿನಲ್ಲಿ ಪ್ಲೇಆಫ್ ಸ್ಥಾನವನ್ನು ಖಾತರಿಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿ ಸಾಧಾರಣ ಮೊತ್ತ (5 ವಿಕೆಟ್ ಗೆ 168) ರನ್ ಕಲೆ ಹಾಕಿದರೂ ಎದುರಾಳಿಯನ್ನು ಕನಿಷ್ಠ ಮೊತ್ತ (86)ಕ್ಕೆ ಕಟ್ಟಿಹಾಕಿದ ಜಿಟಿ ಬೌಲರ್ ಗಳು ತಂಡವನ್ನು ಪ್ಲೇಆಫ್ ಹಂತಕ್ಕೆ ಒಯ್ಯುವಲ್ಲಿ ಯಶಸ್ವಿಯಾದರು. ಉಳಿದ ಮೂರು ಸ್ಥಾನಗಳಿಗೆ ಏಳು ತಂಡಗಳ ಮಧ್ಯೆ ತೀವ್ರ ಪೈಪೋಟಿ ಇದೆ.
ಸತತ ಐದು ಗೆಲುವುಗಳೊಂದಿಗೆ 11 ಪಂದ್ಯಗಳಿಂದ 14 ಅಂಕ ಕಲೆಹಾಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿ ಜಿಟಿ ಅಗ್ರಸ್ಥಾನಕ್ಕೇರಿದೆ. ಸನ್ರೈಸರ್ಸ್ ಕೂಡಾ 12 ಪಂದ್ಯಗಳಿಂದ 14 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ಪಂಜಾಬ್ (11 ಪಂದ್ಯಗಳಿಂದ 13), ಚೆನ್ನೈ ಸೂಪರ್ ಕಿಂಗ್ಸ್ (11 ಪಂದ್ಯಗಳಿಂದ 12) ಮತ್ತು ರಾಜಸ್ಥಾನ ರಾಯಲ್ಸ್ (11 ಪಂದ್ಯಗಳಿಂದ 12) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. 10 ಪಂದ್ಯಗಳಿಂದ 9 ಅಂಕ ಕಲೆ ಹಾಕಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು 12 ಪಂದ್ಯಗಳಿಂದ 10 ಅಂಕ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆ ಕೂಡಾ ಅವಕಾಶದ ಬಾಗಿಲು ಮುಚ್ಚಿಲ್ಲ.
ಕಳೆದ ನಾಲ್ಕು ವರ್ಷಗಳಿಂದಲೂ 16 ಅಂಕ ಪಡೆದ ತಂಡ ಕನಿಷ್ಠ ನಾಲ್ಕನೇ ತಂಡವಾಗಿ ಪ್ಲೇಆಫ್ ಗೆ ಮುನ್ನಡೆದಿದೆ. 2022ರಲ್ಲಿ ಆರ್ಸಿಬಿ, 2023ರಲ್ಲಿ ಎಂಐ ಹಾಗೂ 2025ರಲ್ಲಿ ಎಂಐ 16 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿದ್ದವು. ಕೇವಲ 2024ರಲ್ಲಿ ಮಾತ್ರ ತಲಾ 14 ಅಂಕಗಳನ್ನು ಪಡೆದ ಆರ್ಸಿಬಿ, ಸಿಎಸ್ಕೆ, ಡಿಸಿ ಮತ್ತು ಎಲ್ಎಸ್ಜಿ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ನಡೆಸಿದವು. ಅಂತಿಮವಾಗಿ ಉತ್ತಮ ನಿವ್ವಳ ರನ್ರೇಟ್ ಆಧಾರದಲ್ಲಿ ಆರ್ಸಿಬಿ ಮುನ್ನಡೆದಿತ್ತು.






