ಗಲ್ಫ್ ನಗರಗಳ ಮೇಲೆ ಮುಂದುವರಿದ ಇರಾನ್ ದಾಳಿ : ಅಬುದಾಭಿ, ದುಬೈ, ದೋಹಾ ಮೇಲೆ ಕ್ಷಿಪಣಿ, ಡ್ರೋನ್ಗಳಿಂದ ದಾಳಿ

Photo Credit : PTI
ಅಬುದಾಭಿ,ಮಾ.2: ಇರಾನ್ನ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ಬಳಿಕ ಇರಾನ್ ತನ್ನ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸಿದ್ದು, ಸೋಮವಾರವೂ ಗಲ್ಫ್ ಪ್ರಾಂತದ ಪ್ರಮುಖ ನಗರಗಳಾದ ಅಬುದಾಭಿ, ದುಬೈ, ದೋಹಾ ಕ್ಷಿಪಣಿ , ಡ್ರೋನ್ ದಾಳಿಗೆ ತುತ್ತಾಗಿವೆ.
ಇರಾನ್ನ ನಗರಗಳ ಮೇಲೆ ಅಮೆರಿಕ ಹಾಗೂ ಇಸ್ರೇಲ್ ವಾಯುದಾಳಿ ನಡೆಸಿರುವುದಕ್ಕೆ ಪ್ರತೀಕಾರವಾಗಿ, ಅಮೆರಿಕನ್ ಸೇನಾನೆಲೆಗಳಿರುವ ಗಲ್ಫ್ ರಾಷ್ಟ್ರಗಳ ಮೇಲೆ ದೊಟ್ಟ ಮಟ್ಟದಲ್ಲಿ ಪ್ರತೀಕಾರ ದಾಳಿ ನಡೆಸುತ್ತಿರುವುದಾಗಿ ಇರಾನ್ನ ಕ್ರಾಂತಿಕಾರಿಗಳ ಪಡೆ (ಐಆರ್ಜಿಸಿ) ಘೋಷಿಸಿದೆ.
ಖತರ್ ರಾಜಧಾನಿ ದೋಹಾ, ಬಹರೈನ್ನ ರಾಜಧಾನಿ ಮನಾಮ ಹಾಗೂ ಯುಎಇನ ಅತ್ಯಂತ ಜನನಿಬಿಡ ನಗರ ಅಬುದಾಭಿಯಲ್ಲಿ ಸತತ ಮೂರನೇ ದಿನವೂ ಭಾರೀ ಸ್ಪೋಟದ ಸದ್ದುಗಳು ಕೇಳಿಬಂದಿವೆ.
ಬಹರೈನ್ನ ಬಂದರುನಗರ ಸಲ್ಮಾನ್ನಲ್ಲಿ ಇರಾನ್ನ ಕ್ಷಿಪಣಿಯೊಂದನ್ನು ಅಡ್ಡಗಟ್ಟಿದ ಸಂದರ್ಭ, ವಿದೇಶಿ ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಗಲ್ಫ್ ಪ್ರದೇಶಗಳಲ್ಲಿ ಇರಾನ್ನ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ. ಯುಎಇನಲ್ಲಿ ಮೂವರು, ಕುವೈತ್, ಓಮನ್ ಮತ್ತು ಬಹರೈನ್ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಇರಾನ್ ಮೇಲೆ ತನ್ನ ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದ ಬಳಿಕ, ಇಸ್ರೇಲ್ ನಗರಗಳಾದ ಟೆಲ್ಅವೀವ್ ಹಾಗೂ ಜೆರುಸಲೇಂಗಳ ಮೇಲೆಯೂ ಇರಾನ್ ಪ್ರತಿ ದಾಳಿ ನಡೆಸಿದೆ. ಟೆಲ್ಅವೀವ್ ಹಾಗೂ ಜೆರುಸಲೇಂನೆಡೆಗೆ ಧಾವಿಸಿ ಬರುತ್ತಿದ್ದ ಹಲವಾರು ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ.
ರವಿವಾರ ಸಂಜೆಯಿಂದ ದೋಹಾ, ರಿಯಾದ್, ದುಬೈ ಹಾಗೂ ಅಬುದಾಭಿ ಸೇರಿದಂತೆ ಹಲವಾರು ಗಲ್ಫ್ ನಗರಗಳ ಮೇಲೆ ಟೆಹರಾನ್ ಸರಣಿ ದಾಳಿಗಳನ್ನು ಆರಂಭಿಸಿದೆ. ಬಹರೈನ್ನಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಗಲ್ಲಿ ಐವರು ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ದುಬೈನ ಮೆಡಿಯಾ ಸಿಟಿ ಹಾಗೂ ಜೆಬೆಲ್ ಅಲಿ ಬಂದರು ಪ್ರದೇಶದಲ್ಲಿ ಹಾರಾಡುತ್ತಿದ್ದ ಎರಡು ಇರಾನಿಯನ್ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ.
ಯುಎಇ ಮೇಲೆ ಇರಾನ್ ಈವರೆಗೆ 165 ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಅವುಗಳಲ್ಲಿ 152 ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಹಾಗೂ ಎರಡು ಕ್ರೂಸ್ ಕ್ಷಿಪಣಿಗಳನ್ನು ಭೇದಿಸಲಾಗಿದೆ. ಈವರೆಗೆ ಒಟ್ಟಾರೆ 541 ಡ್ರೋನ್ಗಳನ್ನು ಪತ್ತೆ ಹಚ್ಚಲಾಗಿದ್ದು,ಆ ಪೈಕಿ 506 ಕ್ಷಿಪಣಿಗಳನ್ನು ಅಡ್ಡಗಟ್ಟಿ,ನಾಶಪಡಿಸಲಾಗಿದೆ ಎಂದು ಆ ದೇಶದ ರಕ್ಷಣಾ ಸಚಿವಾಲಯ ತಿಳಿಸಿ ಇರಾನ್ ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದ ಬೆನ್ನಲ್ಲೇ ಆ ದೇಶದೊಂದಿಗೆ ಯುಎಇ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ. ಯುಎಇಲ್ಲಿರುವ ಇರಾನಿಯನ್ ರಾಯಭಾರಿ ಕಚೇರಿಯನ್ನು ಮುಚ್ಚಲಾಗಿದೆ.






