ಚೊಚ್ಚಲ ಪಂದ್ಯ ದಲ್ಲಿ ಹ್ಯಾಲೆಂಡ್ ಮಿಂಚು: ಇರಾಕ್ ವಿರುದ್ಧ ನಾರ್ವೆಗೆ ಗೆಲುವು

Photo Credit : PTI
ಬೋಸ್ಟನ್ : ತಾನು ಆಡಿದ ವಿಶ್ವಕಪ್ ನ ಪದಾರ್ಪಣಾ ಪಂದ್ಯದಲ್ಲಿಯೇ 2 ಗೋಲುಗಳ ಮೂಲಕ ನಾರ್ವೆಯ ಸ್ಟ್ರೈಕರ್ ಅರ್ಲಿಂಗ್ ಹ್ಯಾಲೆಂಡ್ , ಇರಾಕ್ ವಿರುದ್ಧ ನಾರ್ವೆ ಯ 4-1 ಅಂತರದ ಗೆಲುವಿಗೆ ಅಮೂಲ್ಯ ಕೊಡುಗೆ ನೀಡಿದರು .
ಹ್ಯಾಲೆಂಡ್ ಮೊದಲ 28 ನಿಮಿಷಗಳ ಕಾಲ ಹೆಚ್ಚಿನ ಅವಕಾಶಗಳನ್ನು ಪಡೆದಿರಲಿಲ್ಲ. ಆದರೆ, 29 ನೇ ನಿಮಿಷದಲ್ಲಿ ಡಿಫೆಂಡರ್ ಡೇವಿಡ್ ಮೊಲ್ಲರ್ ವೊಲ್ಫ್ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಮೊದಲ ಗೋಲು ಗಳಿಸಿದರು.
ತಿರುಗೇಟು ನೀಡಿದ ಇರಾಕ್, 10 ನಿಮಿಷಗಳಲ್ಲಿ ಐಮನ್ ಹುಸೇನ್ ರ ಅದ್ಭುತವಾದ ಹೆಡರ್ ಮೂಲಕ ಗಳಿಸಿದ ಗೋಲು ಸಹಾಯದಿಂದ ಪಂದ್ಯವನ್ನು ಸಮಬಲಗೊಳಿಸಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಇರಾಕ್ ತಂಡ ಗಳಿಸಿದ ಎರಡನೇ ಗೋಲು ಮತ್ತು ಕಳೆದ 40 ವರ್ಷಗಳಲ್ಲಿ ಅವರ ಮೊದಲ ಗೋಲಾಗಿದೆ.
ಮೊದಲಾರ್ಧ ಮುಗಿಯುವ ಮುನ್ನವೇ, ಇರಾಕ್ ನ ಜೈದ್ ತಾಹಸೀನ್ ಅವರು ಗೋಲ್ಕೀಪರ್ ಜಲಾಲ್ ಹಸನ್ ಗೆ ನೀಡಿದ ದುರ್ಬಲ ಪಾಸ್ ಅನ್ನು ಹ್ಯಾಲೆಂಡ್ ಚೇಸ್ ಮಾಡಿ, ಚೆಂಡನ್ನು ಕಸಿದುಕೊಂಡು 2ನೇ ಗೋಲು ಗಳಿಸಿದರು.
ದ್ವಿತೀಯ ಅವಧಿಯಲ್ಲಿ ಲಿಯೋ ಓಸ್ಟಿಗಾರ್ಡ್ ಮೂರನೇ ಗೋಲು ಗಳಿಸಿ ನಾರ್ವೆಯ ಮುನ್ನಡೆಯನ್ನು ಹೆಚ್ಚಿಸಿದರು . ಆದರೆ ಪಂದ್ಯದ ಅಂತಿಮ ಹಂತದಲ್ಲಿ ಹ್ಯಾಲೆಂಡ್ ಅವರ ಬಲವಾದ ಹೆಡರ್ ಅನ್ನು ತಡೆಯಲು ಹೋದ ಇರಾಕ್ ನ ಐಮನ್ ಹುಸೇನ್ ರಿಂದ ಒಜಿ ಗೋಲು ದಾಖಲಾಯಿತು . ಕೊನೆಗೆ 4-1 ಅಂತರದ ಮೂಲಕ ನಾರ್ವೆ ತಂಡ ಜಯ ಗಳಿಸಿತು.
ಪಂದ್ಯದಲ್ಲಿ ನಾರ್ವೆಯು 5 ನೇರ ಗುರಿಯೊಂದಿಗೆ 11 ಬಾರಿ ಗೋಲು ಪ್ರಯತ್ನ ನಡೆಸಿದರೆ, ಇರಾಕ್ 1 ನೇರ ಗುರಿಯೊಂದಿಗೆ 11 ಬಾರಿ ಗೊಲು ಪ್ರಯತ್ನ ನಡೆಸಿತು.






