ಸಹ ಆಟಗಾರರಿಗೆ ಬೆದರಿಸಿ ಬೆಂಬಲ ಪತ್ರಕ್ಕೆ ಸಹಿ ಮಾಡಿಸಿಕೊಂಡ ಹನುಮ ವಿಹಾರಿ; ಆಂಧ್ರ ಕ್ರಿಕೆಟ್ ಸಂಸ್ಥೆ ಆರೋಪ

ಹನುಮ ವಿಹಾರಿ (Photo: PTI)
ಹೈದರಾಬಾದ್: ತಂಡದ ಸಹ ಆಟಗಾರರಿಗೆ ಬೆದರಿಕೆ ಒಡ್ಡಿ ತನಗೆ ಬೆಂಬಲ ವ್ಯಕ್ತಪಡಿಸುವ ಪತ್ರಕ್ಕೆ ಹನುಮ ವಿಹಾರಿ ಸಹಿ ಪಡೆದಿದ್ದಾರೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಆರೋಪಿಸಿದೆ. ಇದಕ್ಕೂ ಮುನ್ನ ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ್ದ ಹನುಮ ವಿಹಾರಿ, ಆಂಧ್ರ ಕ್ರಿಕೆಟ್ ಸಂಸ್ಥೆ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಮೊದಲ ಪಂದ್ಯದ ನಂತರ ನಾಯಕತ್ವದಿಂದ ಕೆಳಗಿಳಿಯುವಂತೆ ಸೂಚಿಸಿತ್ತು ಎಂದು ದೂರಿದ್ದರು. ನಾನು ಗದರಿದ್ದ ತಂಡದ ಸಹ ಆಟಗಾರನು ರಾಜಕಾರಣಿಯೊಬ್ಬರ ಪುತ್ರನಾಗಿದ್ದುದರಿಂದ ನನ್ನನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು ಎಂದೂ ಅವರು ಆರೋಪಿಸಿದ್ದರು.
ತಂಡದ ಸಹ ಆಟಗಾರರ ಸಹಿಗಳೊಂದಿಗೆ ತಮ್ಮ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹನುಮ ವಿಹಾರಿ ಬಿಡುಗಡೆ ಮಾಡಿದ್ದರು. ಆದರೆ, ಹಿರಿಯ ಆಟಗಾರ ಹನುಮ ವಿಹಾರಿಯಿಂದ ಒತ್ತಡಕ್ಕೊಳಗಾಗಿ ಸಹ ಆಟಗಾರರು ಆ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಆರೋಪಿಸಿದೆ.
"ನಾನು ತಂಡದ ನಾಯಕನಾಗಿ ಮುಂದುವರಿಯಬೇಕು ಎಂದು ಎಲ್ಲ ಆಟಗಾರರೂ ಬೆಂಬಲ ವ್ಯಕ್ತಪಡಿಸುತ್ತಿದ್ದರೂ, ನನ್ನನ್ನು ನಾಯಕತ್ವದಿಂದ ತೆಗೆಯಲಾಯಿತು ಎಂದು ಹನುಮ ವಿಹಾರಿ ಆರೋಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹನುಮ ವಿಹಾರಿ ವಿರುದ್ಧ ಸಂಬಂಧಿಸಿದ ಆಟಗಾರರು ಆಂಧ್ರ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ್ದಾರೆ. ಕೆಲವು ಆಟಗಾರರು ತಮಗೆ ಬೆದರಿಕೆ ಒಡ್ಡಿ ಒತ್ತಡದಿಂದ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಯಿತು ಎಂದು ಆಂಧ್ರ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ್ದಾರೆ. ತಾನು ಸ್ವೀಕರಿಸಿರುವ ಎಲ್ಲ ದೂರುಗಳ ಕುರಿತು ಸೂಕ್ತ ತನಿಖೆ ನಡೆಸಲಿದ್ದು, ವಾಸ್ತವಾಂಶಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ವರದಿ ಮಾಡಲಾಗುವುದು" ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಹೇಳಿದೆ.







