ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷಿಸಲಾಗುವುದು : ಬೌಲಿಂಗ್ ಕೋಚ್ ಮೊರ್ಕೆಲ್

ಹಾರ್ದಿಕ್ ಪಾಂಡ್ಯ | PC : PTI
ದುಬೈ, ಸೆ.27: ಪಾಕಿಸ್ತಾನದ ವಿರುದ್ಧ ರವಿವಾರ ನಡೆಯಲಿರುವ ಏಶ್ಯಕಪ್ ಫೈನಲ್ ಪಂದ್ಯಕ್ಕಿಂತ ಮೊದಲೇ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಹಾಗೂ ಅವರ ಲಭ್ಯತೆಯ ಕುರಿತು ನಿರ್ಧರಿಸಲಾಗುವುದು ಎಂದು ಭಾರತದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಸೂಪರ್-4 ಪಂದ್ಯದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಶ್ರೀಲಂಕಾ ವಿರುದ್ಧ ಶುಕ್ರವಾರ ಮೊದಲ ಓವರ್ ಬೌಲಿಂಗ್ ಮಾಡಿದ ನಂತರ ಮಂಡಿರಜ್ಜು ನೋವಿಗೆ ಒಳಗಾದ ಪಾಂಡ್ಯ ಮೈದಾನವನ್ನು ತೊರೆದಿದ್ದರು. ತಾನೆಸೆದ ಮೊದಲ ಓವರ್ನಲ್ಲಿ ಲಂಕಾದ ಓಪನರ್ ಕುಶಾಲ್ ಮೆಂಡಿಸ್ ವಿಕೆಟನ್ನು ಪಡೆದಿದ್ದರು.
ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಮೈದಾನವನ್ನು ತೊರೆದಿದ್ದರು. ಎಡಗೈ ಬ್ಯಾಟರ್ ಆರೋಗ್ಯವಾಗಿದ್ದಾರೆ ಎಂದು ಮೊರ್ಕೆಲ್ ಸ್ಪಷ್ಟಪಡಿಸಿದ್ದಾರೆ.
‘‘ಇಬ್ಬರೂ ಕೂಡ ಸೆಳೆತದಿಂದ ಬಳಲುತ್ತಿದ್ದರು. ಇಂದು ರಾತ್ರಿ ಹಾಗೂ ನಾಳೆ ಬೆಳಗ್ಗೆ ಹಾರ್ದಿಕ್ ಅವರ ಆರೋಗ್ಯವನ್ನು ಪರೀಕ್ಷಿಸಿ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಭಿಷೇಕ್ ಆರೋಗ್ಯವಾಗಿದ್ದಾರೆ’’ ಎಂದು ಮೊರ್ಕೆಲ್ ಶುಕ್ರವಾರ ಹೇಳಿದರು.
ಒಂದು ವೇಳೆ ಹಾರ್ದಿಕ್ ಅವರು ಫೈನಲ್ ಪಂದ್ಯದಿಂದ ಹೊರಗುಳಿದರೆ, ಭಾರತ ತಂಡದ ಸಮತೋಲನದ ಮೇಲೆ ಹೆಚ್ಚು ಪರಿಣಾಮಬೀರಲಿದೆ. ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ ಕಾರಣ ಪಾಂಡ್ಯ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿರಲಿಲ್ಲ. ಗುರುವಾರ ಬಾಂಗ್ಲಾದೇಶ ವಿರುದ್ಧ 29 ಎಸೆತಗಳಲ್ಲಿ 38 ರನ್ ಗಳಿಸಿದ ಪಾಂಡ್ಯ ಅವರು ಭಾರತವು 41 ರನ್ ಅಂತರದಿಂದ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
31ರ ಹರೆಯದ ಪಾಂಡ್ಯ ಪ್ರಸಕ್ತ ಪಂದ್ಯಾವಳಿಯಲ್ಲಿ 4 ಇನಿಂಗ್ಸ್ಗಳಲ್ಲಿ 48 ರನ್ ಗಳಿಸಿದ್ದಲ್ಲದೆ, 4 ವಿಕೆಟ್ಗಳನ್ನು ಪಡೆದಿದ್ದಾರೆ.
ಹಾರ್ದಿಕ್ ಅನುಪಸ್ಥಿತಿಯಲ್ಲಿ ಅರ್ಷದೀಪ್ ಅಥವಾ ಹರ್ಷಿತ್ ರಾಣಾ ಅವರು ಅವಕಾಶ ಪಡೆಯಬಹುದು. ಆದರೆ ಅರ್ಷದೀಪ್ ಹಾಗೂ ರಾಣಾ ಶ್ರೀಲಂಕಾ ವಿರುದ್ಧ ಸೂಪರ್-4 ಪಂದ್ಯದಲ್ಲಿ 8 ಓವರ್ಗಳಲ್ಲಿ 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿದ್ದರು.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಪ್ರಮುಖ ವೇಗಿ ಜಸ್ಪ್ರಿತ್ ಬುಮ್ರಾ ಹಾಗೂ ಆಲ್ರೌಂಡರ್ ಶಿವಂ ದುಬೆ ಫೈನಲ್ ಪಂದ್ಯದಲ್ಲಿ ಆಡುವ 11ರ ಬಳಗಕ್ಕೆ ವಾಪಸಾಗಲಿದ್ದಾರೆ.







